ನವದೆಹಲಿ: ಪಾಕಿಸ್ತಾನದಲ್ಲಿ ಪ್ರಧಾನಿಗಳು ಹಾಗೂ ಇತರ ಪ್ರಮುಖ ರಾಜಕೀಯ ವ್ಯಕ್ತಿಗಳ ಮೇಲೆ ಹತ್ಯೆ ಯತ್ನಗಳು ಹೊಸದೇನಲ್ಲ. ಪಾಕ್ನಲ್ಲಿ ಇಂತಹ ಹಿಂಸಾಚಾರಕ್ಕೆ ಅತಿದೊಡ್ಡ ಇತಿಹಾಸವೇ ಇದೆ. 1950 ರ ದಶಕದ ಆರಂಭಕ್ಕೂ ಮೊದಲೇ ಅಂದರೆ, ಸ್ವಾತಂತ್ರ್ಯದ ನಂತರ ಸ್ವಲ್ಪ ಸಮಯದ ನಂತರ ಆರಂಭವಾದ ಈ ದಾಳಿಯ ಸ್ವರೂಪ ಆನಂತರದಿಂದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಲೇ ಇದೆ.
ಈ ವಿಷಯ ಏಕೆ ಹೇಳುತ್ತಿದ್ದೇವೆ ಎಂದರೆ ಇಂದು ಪಾಕ್ ಮಾಜಿ ಪ್ರಧಾನಿ ಹಾಗೂ ಕ್ರಿಕೆಟಿಗ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಶಸ್ವಿ ಹತ್ಯೆಗಳ ಕರಾಳ ಇತಿಹಾಸ:
ಅಕ್ಟೋಬರ್ 10, 1951: ದೇಶದ ಮೊದಲ ಪ್ರಧಾನಿ ಲಿಯಾಕತ್ ಅಲಿ ಖಾನ್ ರಾವಲ್ಪಿಂಡಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು.
1958: ಅತ್ಯಂತ ಪ್ರಸಿದ್ಧ ಹಾಗೂ ಅತ್ಯುನ್ನತ ಮಟ್ಟದ ದೊಡ್ಡ 2ನೇ ಹತ್ಯೆ ಎಂದರೆ ಅದು NWFP ರಾಜಕಾರಣಿ ಖಾನ್ ಅಬ್ದುಲ್ ಜಬ್ಬಾರ್ ಖಾನ್ ಅವರದ್ದು. ಖಾನ್, ಪಾಕಿಸ್ತಾನದಲ್ಲಿ ಖಾನ್ ಸಾಹಿಬ್ ಎಂದೇ ಜನಪ್ರಿಯರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರ ಖಾನ್ ಅಬ್ದುಲ್ ಗಫರ್ ಖಾನ್ ಅವರ ಸಹೋದರರಾಗಿದ್ದರು.
1975: ಖೈಬರ್ - ಪಖ್ತುಂಖ್ವಾದ ಮಾಜಿ ಗವರ್ನರ್ ಹಯಾತ್ ಮೊಹಮ್ಮದ್ ಹಯಾತ್ ಖಾನ್ ಶೆರ್ಪಾವೊ, ಬಾಂಬ್ ಸ್ಫೋಟದಲ್ಲಿ ಕೊಲ್ಲಲ್ಪಟ್ಟರು. ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸಹ - ಸಂಸ್ಥಾಪಕರಲ್ಲಿ ಒಬ್ಬರು ಎಂಬುದು ಗಮನಾರ್ಹ
ಅಕ್ಟೋಬರ್ 3, 1991: ಮಾಜಿ ಗವರ್ನರ್ ಮತ್ತು ಮುಖ್ಯಮಂತ್ರಿ, ಲೆಫ್ಟಿನೆಂಟ್ ಜನರಲ್ ಫಜಲ್ - ಎ - ಹಕ್ ಅವರನ್ನು ಪೇಶಾವರದಲ್ಲಿ ಅಪರಿಚಿತ ಆಕ್ರಮಣಕಾರರು ಕೊಂದು ಹಾಕಿದ್ದರು.
ಸೆಪ್ಟೆಂಬರ್, 1996:ಕರಾಚಿಯಲ್ಲಿ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರ ಹಿರಿಯ ಮಗ ಮೀರ್ ಮುರ್ತಾಜಾ ಭುಟ್ಟೋ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.
ಡಿಸೆಂಬರ್ 27, 2007: ರಾವಲ್ಪಿಂಡಿಯ ಲಿಯಾಕತ್ ಬಾಗ್‌ನಲ್ಲಿ ನಡೆದ ಗುಂಡಿನ ದಾಳಿ ಮತ್ತು ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆಗೀಡಾದರು. ದಾಳಿಯ ತೀವ್ರತೆಗೆ ಅವರ ತಲೆ ಕಾರಿನ ಮೇಲ್ಭಾಗಕ್ಕೆ ಬಡಿದು ಸಾವನ್ನಪ್ಪಿದ್ದರು.