ಜಾರ್ಜಿಯಾ(ಅಮೆರಿಕ): ಇಲ್ಲಿನ ಕಾನ್ಯರ್ಸ್‌ನಲ್ಲಿರುವ ಲೇಕ್ ಸೇಂಟ್ ಜೇಮ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಅಟ್ಲಾಂಟಾ ರ‍್ಯಾಪರ್ ಟ್ರಬಲ್ಅನ್ನು ಗುಂಡಿಕ್ಕಿ ಕೊಲ್ಲಲಾಗಿದೆ. 34 ವರ್ಷದ ರ‍್ಯಾಪರ್ ಭಾನುವಾರ ರಾತ್ರಿ ತನ್ನ ಗೆಳತಿಯನ್ನು ಭೇಟಿ ಮಾಡಲು ತೆರಳಿದ್ದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಟ್ರಬಲ್‌ನ ನಿಜವಾದ ಹೆಸರು ಮೇರಿಯಲ್ ಸೆಮೊಂಟೆ ಓರ್. ಭಾನುವಾರ ರಾತ್ರಿ 3.20 ರ ಸಮಯದಲ್ಲಿ ಲೇಕ್ ಸೇಂಟ್ ಜೇಮ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಟ್ರಬಲ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಆತ ಮೃತಪಟ್ಟಿರುವ ಬಗ್ಗೆ ಘೋಷಿಸಿದರು.
ಓದಿ:ಭದ್ರತೆ ಹಿಂಪಡೆದ ಒಂದೇ ದಿನದಲ್ಲಿ ಗುಂಡಿಟ್ಟು ಪಂಜಾಬಿ ಗಾಯಕನ ಬರ್ಬರ ಕೊಲೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ದಾಳಿಕೋರ ಜೆಮಿಸೆಲ್ ಜೋನ್ಸ್ರನ್ನು ಬಂಧಿಸಲು ಪೊಲೀಸರು ವಾರಂಟ್ ಪಡೆದಿದ್ದಾರೆ. ಆದ್ರೂ ಶಂಕಿತ ಆರೋಪಿಯನ್ನು ಪೊಲೀಸರು ಇನ್ನೂ ವಶಕ್ಕೆ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ. ಟ್ರಬಲ್ ತನ್ನ ಗೆಳತಿಯನ್ನು ಭೇಟಿಯಾಗಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರ‍್ಯಾಪರ್ ಡೆಫ್ ಜಾಮ್ ಅವರು ಇನ್ಸ್ಟಾಗ್ರಾಮ್ನಲ್ಲಿ ಟ್ರಬಲ್‌ನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಟ್ರಬಲ್ 'December 17th’ ಎಂಬ ತನ್ನ ಮೊದಲ ಮಿಕ್ಸ್‌ಟೇಪ್ ಅನ್ನು 2011 ರಲ್ಲಿ ಬಿಡುಗಡೆ ಮಾಡಿದ್ದರು. ಬಳಿಕ 2018 ರಲ್ಲಿ 'ಎಡ್ಜ್‌ವುಡ್' ಆಲ್ಬಂ ಅನ್ನು ಹೊರಗೆ ತಂದರು. ಈ ಕುರಿತು ಈ ಹಿಂದೆ ಮಾತನಾಡಿದ್ದ ಅವರು, ನನ್ನ ಸಂಗೀತವು ವೈಯಕ್ತಿಕ ಮಟ್ಟದಲ್ಲಿ ಹೋಗುತ್ತದೆ. ಇವು ನನ್ನ ಜೀವನದ ಕಥೆಗಳು. ನಾನು ನಿಜವಾದ ಸಂಬಂಧವನ್ನು ಹೊಂದಲು ಇಷ್ಟಪಡುತ್ತೇನೆ ಎಂದು ಟ್ರಬಲ್ ಹೇಳಿದ್ದರು.