ಕೊಲಂಬೊ(ಶ್ರೀಲಂಕಾ):ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ನಡುವೆ ನೂತನ ಪ್ರಧಾನಿಯಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ. 73 ವರ್ಷದ ವಿಕ್ರಮಸಿಂಘೆ ತಮ್ಮ ಕಚೇರಿಯಲ್ಲಿ ಪ್ರಮಾಣ ವಚನ ಸಹ ಸ್ವೀಕಾರ ಮಾಡಿದ್ದಾರೆಂದು ಅಲ್ಲಿನ ಸುದ್ದಿಸಂಸ್ಥೆವೊಂದು ವರದಿ ಮಾಡಿದೆ.
ಕಳೆದ ಕೆಲ ತಿಂಗಳಿಂದ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿ ತುರ್ತು ಪರಿಸ್ಥಿತಿ ಹೇರಿದ ಮಧ್ಯೆಯೇ ದೇಶದ ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ:ರಾಜೀನಾಮೆ ಬೆನ್ನಲ್ಲೇ ಪಲಾಯನ ಮಾಡಿದ ರಾಜಪಕ್ಸೆ.. ನೌಕಾನೆಲೆಯಲ್ಲಿ ಕುಟುಂಬದೊಂದಿಗೆ ಆಶ್ರಯ
1977 ರಲ್ಲಿ ಬಿಯಾಗಾಮ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಯುಎನ್ಪಿ ಪಕ್ಷದ ರಾನಿಲ್ ವಿಕ್ರಮಸಿಂಘೆ, 1993 ರಿಂದ 1994 ಮತ್ತು 2001 ರಿಂದ 2004 ರವರೆಗೆ ಪ್ರಧಾನ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. 1994ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಸಮಯದಲ್ಲಿ ಗಾಮಿನಿ ದಿಸನಾಯಕ ಅವರ ಹತ್ಯೆಯ ನಂತರ ನವೆಂಬರ್ 1994 ರಲ್ಲಿ ಪಕ್ಷದ ನಾಯಕರಾಗಿ ಆಯ್ಕೆಯಾದರು.
2015 ರ ರಾಷ್ಟ್ರಪತಿ ಚುನಾವಣೆಯಲ್ಲಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ಸೋಲಿಸಿದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು 2015ರಲ್ಲಿ ವಿಕ್ರಮಸಿಂಘೆ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಿಸಿದ್ದರು. ಇದಾದ ಬಳಿಕ 2018ರಲ್ಲಿ ಇವರನ್ನ ವಜಾಗೊಳಿಸಿ, ಮಹಿಂದಾ ರಾಜಪಕ್ಸೆ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಇದೀಗ ಮತ್ತೊಮ್ಮೆ ಪ್ರಧಾನಿ ಹುದ್ದೆಗೆ ಏರಿದ್ದಾರೆ.
ಶ್ರೀಲಂಕಾದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಈ ವಾರವೇ ಹೊಸ ಸಂಪುಟ ರಚನೆ ಮಾಡಿ, ಹೊಸ ಪ್ರಧಾನಿ ನೇಮಕ ಮಾಡುವುದಾಗಿ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ನಿನ್ನೆ ರಾತ್ರಿ ಭರವಸೆ ನೀಡಿದ್ದರು.