ವಾಷಿಂಗ್ಟನ್: ರಾಮಾಯಣವು ವಿಶ್ವದ ಭೌಗೋಳಿಕ ಸೇತುವೆಯಾಗಿದೆ ಮತ್ತು ಮಾನವ ಸಂಬಂಧಗಳ ಸಂಕೀರ್ಣತೆ, ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಶಾಶ್ವತ ಹೋರಾಟದ ಬಗ್ಗೆ ಜನರಿಗೆ ತಿಳಿಸುತ್ತದೆ ಎಂದು ಯುಎಸ್‌ನಲ್ಲಿ ಭಾರತೀಯ ರಾಯಭಾರಿ ತರನ್ಜೀತ್ ಸಿಂಗ್ ಸಂಧು ಬುಧವಾರ ಹೇಳಿದ್ದಾರೆ.
ವಾಷಿಂಗ್ಟನ್ ಡಿಸಿಯ ಯುಎಸ್ ಕ್ಯಾಪಿಟಲ್ ಹಿಲ್ನಲ್ಲಿ ನಡೆದ 'ಏಷ್ಯಾ ಮತ್ತು ಅದರಾಚೆಗಿನ ರಾಮಾಯಣ' (Ramayana across Asia and Beyond) ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ ರಾಯಭಾರಿ, "ರಾಮಾಯಣವು ಇಂಡೋ-ಪೆಸಿಫಿಕ್ನಾದ್ಯಂತದ ಪರಂಪರೆಗೆ ಸಾಕ್ಷಿಯಾಗಿದೆ. ರಾಮಾಯಣದ ಪಾಠಗಳು ಮತ್ತು ಕಥೆಗಳು ತಲೆಮಾರುಗಳಿಂದ ಬಂದಿವೆ. ಅವುಗಳನ್ನು ಯಾರು ಯಾವಾಗ ಕಲಿಯುತ್ತಾರೆ ಎಂಬುದಕ್ಕಿಂತ ಆ ಮೌಲ್ಯಗಳೊಂದಿಗೇ ಅವರು ಜನಿಸುತ್ತಾರೆ. ಈ ಮಹಾಕಾವ್ಯವು ಮಾನವ ಸಂಬಂಧಗಳು, ಆಡಳಿತ ಮತ್ತು ಆಧ್ಯಾತ್ಮಿಕತೆ, ಧರ್ಮ ಅಥವಾ ಕರ್ತವ್ಯ, ನ್ಯಾಯ, ತ್ಯಾಗ, ನಿಷ್ಠೆ ಮತ್ತು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಶಾಶ್ವತ ಹೋರಾಟದ ಸಂಕೀರ್ಣತೆಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ರಾಮಾಯಣವು ಈ ಪ್ರತಿಯೊಂದು ವಿಷಯಗಳ ಬಗ್ಗೆ, ಇತರ ಅನೇಕ ವಿಷಯಗಳ ಬಗ್ಗೆ ನಮಗೆ ಒಂದಿಲ್ಲೊಂದು ವಿಷಯವನ್ನು ಕಲಿಸುತ್ತದೆ" ಎಂದು ಹೇಳಿದರು.
"ರಾಮಾಯಣವು ಭೌಗೋಳಿಕತೆಗಳ ಮಧ್ಯದ ಸೇತುವೆಯಾಗಿದೆ. ಈ ಮಹಾಕಾವ್ಯದ ಕಥೆಗಳು ಇಂಡೋ ಪೆಸಿಫಿಕ್‌ನಾದ್ಯಂತ, ಕಾಂಬೋಡಿಯಾದಿಂದ ಇಂಡೋನೇಷ್ಯಾದವರೆಗೆ, ಥಾಯ್ಲೆಂಡ್‌ನಿಂದ ಲಾವೋಸ್‌ವರೆಗೆ ಅನೇಕ ದೇಶಗಳಲ್ಲಿ ಪ್ರಸಿದ್ಧವಾಗಿವೆ. ಮಹಾಕಾವ್ಯವನ್ನು ಮರುಕಲ್ಪಿಸಲಾಗಿದೆ, ಪುನರಾವರ್ತಿಸಲಾಗಿದೆ, ವಿವಿಧ ಸಮಾಜಗಳ ಕಲಾತ್ಮಕ, ಸಾಹಿತ್ಯಕ ಮತ್ತು ಧಾರ್ಮಿಕ ಸಂಪ್ರದಾಯಗಳಲ್ಲಿ ಅವುಗಳ ವಿಶಿಷ್ಟ ಸಾಂಸ್ಕೃತಿಕ ಸೂಕ್ಷ್ಮತೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಗಡಿಯಾಚೆಗಿನ ರಾಮಾಯಣದ ಈ ಪ್ರಭಾವಕ್ಕೆ ನಾನು ವೈಯಕ್ತಿಕವಾಗಿ ಸಾಕ್ಷಿಯಾಗಿದ್ದೇನೆ" ಎಂದು ರಾಯಭಾರಿ ಸಂಧು ತಿಳಿಸಿದರು.