ಕೊಲಂಬೊ(ಶ್ರೀಲಂಕಾ): ತೀವ್ರಆರ್ಥಿಕ ದುಸ್ಥಿತಿಯಿಂದ ಕಂಗಾಲಾಗಿರುವ ಶ್ರೀಲಂಕಾದಲ್ಲಿ ಜನರ ಪ್ರತಿಭಟನೆ ತಾರಕಕ್ಕೇರುತ್ತಿದೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆಲವೇ ಗಂಟೆಗಳ ಮೊದಲು ಮಹಿಂದ ರಾಜಪಕ್ಸ ಕುಟುಂಬದ ಪೂರ್ವಜರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ರಾಜಪಕ್ಸ ಮಾತ್ರವಲ್ಲದೇ, ಹಲವು ಸಚಿವರು ಮತ್ತು ಮಾಜಿ ಸಚಿವರ ಮನೆಗಳಿಗೂ ಬೆಂಕಿಯಿಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ನಿನ್ನೆ(ಸೋಮವಾರ) ದೇಶದ ಹಲವೆಡೆ ಹಿಂಸಾಚಾರ ನಡೆದಿವೆ. ಈ ಘಟನಾವಳಿಗಳಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಓರ್ವ ಸಂಸದ ಸೇರಿ ಐವರು ಸಾವನ್ನಪ್ಪಿದ್ದಾರೆ. ಕೊಲಂಬೊದಲ್ಲಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಕಚೇರಿಯ ಹೊರಗೆ ಸರ್ಕಾರದ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವೆ ಭುಗಿಲೆದ್ದ ಹಿಂಸಾತ್ಮಕ ಘರ್ಷಣೆಯ ಹಿನ್ನೆಲೆಯಲ್ಲಿ ಮಹಿಂದಾ ರಾಜಪಕ್ಸ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಘರ್ಷಣೆ ತೀವ್ರ ಸ್ವರೂಪ ಪಡೆದಿದೆ.