ನವದೆಹಲಿ :ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಟ್ರಕ್‌ನಲ್ಲಿ ಪ್ರಯಾಣಿಸುವ ಮೂಲಕ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಅವರು ಹೀಗೆ ಮಾಡಿದ್ದು ಭಾರತದಲ್ಲಿ ಅಲ್ಲ, ಬದಲಾಗಿ ಅಮೆರಿಕದಲ್ಲಿ. ವಾಶಿಂಗ್ಟನ್ನಿಂದ ನ್ಯೂಯಾರ್ಕ್ವರೆಗೆ ಟ್ರಕ್‌ನಲ್ಲಿ ಪ್ರಯಾಣಿಸಿದ ರಾಹುಲ್, ಪ್ರಯಾಣದುದ್ದಕ್ಕೂ ಟ್ರಕ್ ಚಾಲಕನೊಂದಿಗೆ ಆತ್ಮೀಯ ಸಂವಾದ ನಡೆಸಿದ್ದಾರೆ. ಅಮೆರಿಕದಲ್ಲಿ ಟ್ರಕ್ ಚಾಲಕರಾಗಿ ಕೆಲಸ ಮಾಡುವ ಭಾರತೀಯರ ಸ್ಥಿತಿಗತಿಗಳ ಬಗ್ಗೆ ಈ ಸಂದರ್ಭದಲ್ಲಿ ಅವರು ತಿಳಿಯಲು ಪ್ರಯತ್ನಿಸಿದ್ದಾರೆ.
ಇತ್ತೀಚೆಗೆ ರಾಹುಲ್ ಭಾರತದಲ್ಲಿ ದೆಹಲಿಯಿಂದ ಚಂಡೀಗಢವರೆಗೆ ಟ್ರಕ್‌ನಲ್ಲಿ ಪ್ರಯಾಣಿಸಿ, ಚಾಲಕರ ಸುಖ ದುಃಖಗಳನ್ನು ಅರಿಯುವ ಪ್ರಯತ್ನ ಮಾಡಿದ್ದರು. ಈಗ ಅದೇ ಮಾದರಿಯಲ್ಲಿ ಅವರು ಅಮೆರಿಕದಲ್ಲಿ ಟ್ರಕ್ ಪ್ರಯಾಣ ಮಾಡಿದ್ದಾರೆ.
ಭಾರತ ಮತ್ತು ಸಾಗರೋತ್ತರ ಜನರ ಮಾತುಗಳನ್ನು ಆಲಿಸುವ ಪ್ರಯತ್ನದ ಭಾಗವಾಗಿ ತಮ್ಮ ಪ್ರಯಾಣವನ್ನು ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್, ವಾಷಿಂಗ್ಟನ್ ಡಿಸಿಯಿಂದ ನ್ಯೂಯಾರ್ಕ್‌ಗೆ 190 ಕಿಮೀ ಅಮೆರಿಕನ್ ಟ್ರಕ್ ಯಾತ್ರೆ ಮಾಡಿದ್ದಾರೆ. ಚಾಲಕ ತಲ್ಜಿಂದರ್ ಸಿಂಗ್ ವಿಕ್ಕಿ ಗಿಲ್ ಮತ್ತು ಅವರ ಸಹಚರ ರಂಜೀತ್ ಸಿಂಗ್ ಬಾನಿಪಾಲ್ ಅವರೊಂದಿಗೆ ರಾಹುಲ್ ಪ್ರವಾಸ ಕೈಗೊಂಡರು. ಒಂದು ಉಪಾಹಾರ ಗೃಹದಲ್ಲಿ ರುಚಿಕರವಾದ ಉಪಹಾರದೊಂದಿಗೆ ಅವರ ಯಾತ್ರೆ ಕೊನೆಗೊಂಡಿತು ಎಂದು ಕಾಂಗ್ರೆಸ್ ಪಕ್ಷದ ಪ್ರಕಟಣೆ ಹೇಳಿದೆ.
ದೆಹಲಿಯಿಂದ ಚಂಡೀಗಢಕ್ಕೆ ಅವರ ಟ್ರಕ್ ಸವಾರಿಯಂತೆಯೇ ಅಮೆರಿಕದಲ್ಲಿರುವ ಭಾರತೀಯ ಮೂಲದ ಟ್ರಕ್ ಡ್ರೈವರ್‌ಗಳ ದೈನಂದಿನ ಜೀವನದ ಸುತ್ತ ರಾಹುಲ್ ಅವರ ಸಂವಾದ ಕೇಂದ್ರೀಕೃತವಾಗಿತ್ತು. ಅಮೆರಿಕದಲ್ಲಿನ ಟ್ರಕ್‌ಗಳನ್ನು ಚಾಲಕನ ಸುರಕ್ಷತೆ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದ್ದನ್ನು ರಾಹುಲ್ ಈ ಸಂದರ್ಭದಲ್ಲಿ ಪ್ರಮುಖವಾಗಿ ಗಮನಿಸಿದರು. ಆದರೆ ಭಾರತದಲ್ಲಿ ಟ್ರಕ್‌ಗಳನ್ನು ಹೀಗೆ ವಿನ್ಯಾಸಗೊಳಿಸಿಲ್ಲ ಎಂದು ಅವರು ಹೇಳಿದರು.