ಲಂಡನ್ (ಬ್ರಿಟನ್):ಬ್ರಿಟನ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಂಡನ್ ಬರೋ ಆಫ್ ಲ್ಯಾಂಬೆತ್‌ನಲ್ಲಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬ್ರಿಟಿಷ್ ಸಂಸತ್ತಿನ ಎದುರು ಭಾರತದ ಶ್ರೇಷ್ಠ ಸಮಾಜ ಸುಧಾರಕ ಬಸವಣ್ಣನ ಪ್ರತಿಮೆಯನ್ನು ನೋಡುವುದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆಯ ವಿಷಯವಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಲಂಡನ್ನ ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಉಪನ್ಯಾಸ ನಿಮಿತ್ತ ರಾಹುಲ್ ಗಾಂಧಿ ಪ್ರವಾಸ ಕೈಗೊಂಡಿದ್ದಾರೆ. ಇಂದು ಬಸವೇಶ್ವರರ ಪ್ರತಿಮೆ ಸ್ಥಳಕ್ಕೆ ಅವರು ಭೇಟಿ ನೀಡಿ, ಮಾಲಾರ್ಪಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್, ಬಸವಣ್ಣನವರು ಭಾರತದ ಪ್ರಜಾಪ್ರಭುತ್ವದ ಹರಿಕಾರರು. ಶ್ರೇಷ್ಠ ಸಮಾಜ ಸುಧಾರಕರು ಆಗಿದ್ದಾರೆ. ಬ್ರಿಟಿಷ್ ಸಂಸತ್ತಿನ ಮುಂದೆ ಅವರ ಪ್ರತಿಮೆಯನ್ನು ನೋಡುವುದೇ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು. ಇದೇ ವೇಳೆ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಸ್ಥಾಪನೆಗೆ ಶ್ರಮಿಸಿದ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನಕ್ಕೂ ರಾಹುಲ್ ಕೃತಜ್ಞತೆ ಸಲ್ಲಿಸಿದರು.
ಲಂಡನ್‌ನಲ್ಲಿ ಬಸವೇಶ್ವರರ ಪ್ರತಿಮೆ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದರು. ಇದನ್ನೂ ಓದಿ:ಪೆಗಾಸಸ್ ಮೂಲಕ ನನ್ನ ಫೋನ್ ಮೇಲೆ ಗೂಢಚಾರಿಕೆ; ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ ಭೇಟಿ ಸಮಯದಲ್ಲಿ ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಆದ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ ಡಾ. ನೀರಜ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 2015ರ ನವೆಂಬರ್ 14ರಂದು ಲಂಡನ್‌ನಲ್ಲಿ ಬಸವೇಶ್ವರರ ಪ್ರತಿಮೆಯಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದರು. ಯುನೈಟೆಡ್ ಕಿಂಗ್‌ಡಂನ ಪ್ರತಿಮೆಗಳ ಕಾಯ್ದೆ 1854ರ ಪ್ರಕಾರ ಬ್ರಿಟಿಷ್ ಕ್ಯಾಬಿನೆಟ್ ಅನುಮೋದಿಸಿದ ನಂತರ ಸಂಸತ್ ಸಮೀಪದಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಬಸವೇಶ್ವರರ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿದ ಪ್ರಮುಖರು: ಲಂಡನ್ ಪ್ರವಾಸ ಕೈಗೊಂಡು ಬಹುತೇಕ ಗಣ್ಯರು ಬಸವೇಶ್ವರರ ಪ್ರತಿಮೆ ಸ್ಥಳಕ್ಕೆ ಭೇಟಿ ಕೊಟ್ಟು ಗೌರವ ಸಲ್ಲಿಸುವುದನ್ನು ನಾವು ಸ್ಮರಿಸಬಹುದು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಅನೇಕರು ಬಸವಣ್ಣನ ಪ್ರತಿಮೆ ಸ್ಥಳಕ್ಕೆ ತೆರಳಿ ಮಾಲಾರ್ಪಣೆ ಮಾಡಿದ್ದಾರೆ. ಇತ್ತೀಚೆಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಕೂಡ ಭೇಟಿ ಕೊಟ್ಟಿದ್ದರು.
ಪತ್ನಿ ಸಮೇತವಾಗಿ ಬಸವಣ್ಣನವರ ಪ್ರತಿಮೆಗೆ ವಿಜಯ್ ಪ್ರಕಾಶ್ ಗೌರವ ಅರ್ಪಿಸಿದ್ದರು. ಇದೇ ವೇಳೆ ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಎಂಬ ಪ್ರಸಿದ್ಧ ವಚನವನ್ನೂ ವಿಜಯ್ ಪ್ರಕಾಶ್ ವಾಚಿಸಿದ್ದರು. ಅಲ್ಲದೇ, ಬಸವಣ್ಣನವರು ಭಾರತ ಮತ್ತು ಕರ್ನಾಟಕದ ಆದರ್ಶ ಪುರುಷ. ಅವರ ಪ್ರತಿಮೆಯನ್ನು ಬ್ರಿಟನ್ ಸಂಸತ್ತಿನ ಮುಂದೆ ನೋಡುವುದೇ ಪ್ರತಿಯೊಬ್ಬ ಭಾರತೀಯ ಹಾಗೂ ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದ್ದರು. ಬ್ರಿಟನ್ನಲ್ಲಿ ಕನ್ನಡ ಸಂಸ್ಕೃತಿ ಹಾಗೂ ಪರಂಪರೆಯನ್ನು ಹರಡುತ್ತಿರುವ ಬ್ರಿಟಿಷ್ ಕನ್ನಡ ಸಮುದಾಯದ ಬಗ್ಗೆಯೂ ವಿಜಯ್ ಪ್ರಕಾಶ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಲಂಡನ್‌ನಲ್ಲಿ ಬಸವಣ್ಣ ಪ್ರತಿಮೆಗೆ ವಿಜಯ್ ಪ್ರಕಾಶ್ ನಮನ: ವಚನ ಗಾಯನ