ಸ್ಯಾನ್ಫ್ರಾನ್ಸಿಸ್ಕೋ (ಅಮೆರಿಕ):ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣಕ್ಕೆ ವಿರೋಧ ವ್ಯಕ್ತವಾಗಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಭೆಯಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಸಭಿಕರು ಘೋಷಣೆಗಳನ್ನು ಕೂಗಿದರು. ಸಭೆಯಿಂದ ಪ್ರತಿಭಟನಾಕಾರರನ್ನು ಹೊರಹಾಕುವ ಮೊದಲು ರಾಹುಲ್ ನಗುತ್ತಲೇ 'ಭಾರತ್ ಜೋಡೋ' ಎಂದು ಹೇಳಿ ಅವರತ್ತ ಕೈ ಬೀಸಿದರು.
ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಲಾಗಿದ್ದ 'ಪ್ರೀತಿಯ ಅಂಗಡಿ' ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಿದ್ದರು. ಎಂದಿನಂತೆ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ಶುರು ಮಾಡಿದರು. "ದೇಶದಲ್ಲಿ ಪ್ರಜಾಸತ್ತೆ ನಾಶವಾಗಿದೆ. ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಬಿಜೆಪಿ ಸರ್ಕಾರ ಜನರನ್ನು ಬೆದರಿಸುತ್ತಿದೆ" ಎಂದೆಲ್ಲ ಆರೋಪದ ಸುರಿಮಳೆ ಸುರಿಸಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ತಾವು ನಡೆಸಿದ ಭಾರತ್ ಜೋಡೋ ಯಾತ್ರೆಯ ಬಗ್ಗೆಯೂ ಅವರು ಇದೇ ವೇಳೆ ಹೇಳಿಕೊಂಡರು.
ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿದ್ದು ಅಷ್ಟು ಸುಲಭವಾಗಿರಲಿಲ್ಲ. ದಿನವೂ ನಡೆಯುವುದು ಸವಾಲಾಗಿತ್ತು. ಆದರೆ, ನನ್ನ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಉತ್ಸಾಹದಿಂದ ನೂರಕ್ಕೂ ಹೆಚ್ಚು ದಿನ ಪಾದಯಾತ್ರೆಯಿಂದ ಹಲವು ರಾಜ್ಯಗಳನ್ನು ಕ್ರಮಿಸಿ ಕಾಶ್ಮೀರದಲ್ಲಿ ಅಂತ್ಯಗೊಳಿಸಿದೆವು ಎಂದು ಹೇಳಿದರು.
ಹಳೆಯ ಪಕ್ಷ ಕಾಂಗ್ರೆಸ್ ಬಗ್ಗೆ ಜನರಿಗೆ ಪ್ರೀತಿಯಿದೆ. ಪಕ್ಷಕ್ಕೆ ಯಾರು ಬೇಕಾದರೂ ಬರಲು ಬಯಸುತ್ತಾರೆ. ಅವರು ಪಕ್ಷ ಸೇರಿದ ಬಳಿಕ ಮುಕ್ತವಾಗಿ ಮಾತನಾಡುವ ಅವಕಾಶ ಹೊಂದುತ್ತಾರೆ. ಅವರು ಏನೇ ಹೇಳಿದರೂ, ನಮ್ಮಲ್ಲಿ ಯಾರೂ ಕೋಪಿಸಿಕೊಳ್ಳುವುದಿಲ್ಲ, ಅವರ ವಿರುದ್ಧ ಮಾತನಾಡುವುದಿಲ್ಲ. ನಾವೆಲ್ಲರೂ ಅದನ್ನು ಚೆನ್ನಾಗಿ ಕೇಳಿಸಿಕೊಳ್ಳುತ್ತೇವೆ. ವಾಸ್ತವವಾಗಿ, ನಾವು ಅವರೊಂದಿಗೆ ಪ್ರೀತಿಯಿಂದ ಇರುತ್ತೇವೆ. ಅವರೂ ನಮ್ಮನ್ನು ಪ್ರೀತಿಸುತ್ತಾರೆ. ಅದು ನಮ್ಮ ಸ್ವಭಾವವಾಗಿದೆ. ಆದರೆ, ಬೇರೆ ಪಕ್ಷಗಳಲ್ಲಿ ಅದು ಇಲ್ಲ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.