ವಾಷಿಂಗ್ಟನ್( ಅಮೆರಿಕ):ಭಾರತದಲ್ಲಿ ವೀಸಾ ನೇಮಕಾತಿಗಳಲ್ಲಿ ಆಗುತ್ತಿರುವ ದೀರ್ಘ ವಿಳಂಬದ ಬಗ್ಗೆ ನಮಗೆ ಅರಿತಿದ್ದು, ವೀಸಾ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಗಳಿಗೆ ಶೀಘ್ರದಲ್ಲೇ ಉತ್ತಮ ಸೇವೆ ಮೂಲಕ ಪ್ರತಿಕ್ರಿಯಿಸಲು ನಾವು ಕಾರ್ಯ ನಿವರ್ಹಿಸುತ್ತಿದ್ದೇವೆ ಎಂದು ಶ್ವೇತಭವನ ಗುರುವಾರ ತಿಳಿಸಿದೆ.
ಭಾರತದಲ್ಲಿನ ಅಮೆರಿಕ ಸಂಸ್ಥೆಗಳಲ್ಲಿ ವೀಸಾ ಅಪಾಯಿಂಟ್ಮೆಂಟ್ಗಾಗಿ ದೀರ್ಘಕಾಲ ಕಾಯುವ ಅದರಲ್ಲೂ ಪ್ರಸ್ತುತ 1,000 ದಿನಗಳಿಗಿಂತಲೂ ಹೆಚ್ಚು ಕಾಲ ಕಾಯಬೇಕಿರುವ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲಿ ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಉತ್ತರಿಸಿದ್ದಾರೆ. ಕೋವಿಡ್ನಿಂದ ಸೇವೆಗೆ ಹೇರಿದ್ದ ನಿರ್ಬಂಧದಿಂದ ಹಾಗೂ ಸಿಬ್ಬಂದಿ ಸಮಸ್ಯೆಯಿಂದ ನಾವು ಚೇತರಿಸಿಕೊಳ್ಳುತ್ತಿದ್ದೇವೆ. ಆದರೂ ನಮ್ಮಿಂದ ಸಾಧ್ಯವಾದಷ್ಟು ವೀಸಾ ಸೇವೆಯ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತಿದ್ದೇವೆ ಎಂದರು.
ಆ ನಿಟ್ಟಿನಲ್ಲೇ ನಾವು ಕೆಲಸ ಮಾಡುತ್ತಿದ್ದು, ಪ್ರಪಂಚದಾದ್ಯಂತ ವೀಸಾ ಸಂದರ್ಶನದ ಕಾಯುವ ಸಮಯವನ್ನು ಯಶಸ್ವಿಯಾಗಿ ಕಡಿಮೆ ಮಾಡುತ್ತಿದ್ದೇವೆ. ಇದಕ್ಕಾಗಿ ಅಮೆರಿಕ ವಿದೇಶಾಂಗ ಸೇವೆಯ ಸಿಬ್ಬಂದಿ ನೇಮಕವನ್ನೂ ದ್ವಿಗುಣಗೊಳಿಸಿದ್ದೇವೆ. ವೀಸಾ ಪ್ರಕ್ರಿಯೆ ಅಂದುಕೊಂಡದ್ದಕ್ಕಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಈ ವರ್ಷವೇ ನಾವು ಸಾಂಕ್ರಾಮಿಕ ಪೂರ್ವದಲ್ಲಿದ್ದ ವೇಗದ ಸೇವೆ ನೀಡಲು ಪ್ರಯತ್ನಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ದೀರ್ಘವಾದ ಬ್ಯಾಕ್‌ಲಾಗ್:ವಲಸೆರಹಿತ ವೀಸಾ, ಸಂದರ್ಶಕ ವೀಸಾ (B1/B2), ವಿದ್ಯಾರ್ಥಿ ವೀಸಾ (F1/F2), ಮತ್ತು ತಾತ್ಕಾಲಿಕ ಉದ್ಯೋಗಿ ವೀಸಾ (H, L, O, P, Q) ಭಾರತ ಸೇರಿದಂತೆ ಪಾಕಿಸ್ತಾನ, ಬಾಂಗ್ಲಾದೇಶ, ಮತ್ತು ನೇಪಾಳ ಮತ್ತು ಪೆಸಿಫಿಕ್ ದ್ವೀಪಗಳು, ಇತರ ಏಷ್ಯಾದ ದೇಶಗಳಲ್ಲಿ ರಾಯಭಾರ ಕಚೇರಿಗಳಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ದೀರ್ಘವಾದ ಬ್ಯಾಕ್‌ಲಾಗ್ ಹೊಂದಿವೆ.