ಲಂಡನ್(ಇಂಗ್ಲೆಂಡ್):ಬ್ರಿಟನ್ ಇತಿಹಾಸದಲ್ಲೇ ಸುದೀರ್ಘ ಕಾಲ ಆಳ್ವಿಕೆ ನಡೆಸಿದ ಖ್ಯಾತಿಯ ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆ ಸೆ.19ರಂದು ನೆರವೇರಿದೆ. ಇದಕ್ಕೂ ಮುನ್ನ ಲಂಡನ್‌ನ ಸಂಸತ್ತಿನ ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ 4 ದಿನಗಳ ಕಾಲ ರಾಣಿಯ ಶವಪೆಟ್ಟಿಗೆಯನ್ನು ನೋಡಲು ಕನಿಷ್ಠ 2,50,000 ಜನರು ಬೃಹತ್ ಸಾಲಿನಲ್ಲಿ ನಿಂತಿದ್ದರು ಎಂದು ತಿಳಿದುಬಂದಿದೆ.
ಚಳಿಯನ್ನೂ ಲೆಕ್ಕಿಸದೆ ಸರದಿಯಲ್ಲಿದ್ದ ಅನೇಕರು 13 ಗಂಟೆಗಳವರೆಗೆ ಕಾಯುತ್ತಿದ್ದರು. ದಿವಂಗತ ರಾಣಿಗೆ ಗೌರವ ಸಲ್ಲಿಸಲು ಥೇಮ್ಸ್ ನದಿಯುದ್ದಕ್ಕೂ ಅವರು ರಾತ್ರಿ ಕಳೆದಿದ್ದರು. ಲಂಡನ್ ಆರೋಗ್ಯ ಸಿಬ್ಬಂದಿ ಮತ್ತು ಸ್ವಯಂಸೇವಕರು ಸಾಲಿನಲ್ಲಿ ನಿಂತಿದ್ದ ಸುಮಾರು 2,000 ಜನರನ್ನು ನೋಡಿಕೊಂಡಿದ್ದರು ಎಂದು ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ.
ಸ್ಕಾಟ್ಲೆಂಡ್‌ನ ಬಾಲ್ಮೊರಲ್ ಕ್ಯಾಸ್ಟಲ್ ಅರಮನೆಯಲ್ಲಿ ಸೆ. 8ರಂದು ಎಲಿಜಬೆತ್ ನಿಧನರಾಗಿದ್ದರು. 10 ದಿನಗಳ ಶೋಕಾಚರಣೆಯ ಬಳಿಕ ವಿಶ್ವನಾಯಕರು ಸೇರಿದಂತೆ ಲಕ್ಷಾಂತರ ಮಂದಿಯ ಸಮ್ಮುಖದಲ್ಲಿ ರಾಣಿಯ ಪಾರ್ಥಿವ ಶರೀರವನ್ನು ವೆಸ್ಟ್‌ಮಿನ್‌ಸ್ಟರ್ ಹಾಲ್‌ನಿಂದ ವಿಂಡ್ಸರ್ ಕ್ಯಾಸಲ್‌ನ ಸೈಂಟ್ ಜಾರ್ಜ್ ಚಾಪೆಲ್‌ಗೆ ಮೆರವಣಿಗೆ ಮಾಡಲಾಗಿತ್ತು. ಬಳಿಕ ಪತಿ ಪ್ರಿನ್ಸ್ ಫಿಲಿಪ್ ಸಮಾಧಿಯ ಪಕ್ಕದಲ್ಲೇ ಮಣ್ಣು ಮಾಡಲಾಗಿದೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ದೇಶ-ವಿದೇಶಗಳ ಸುಮಾರು 2 ಸಾವಿರ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಇನ್ನೊಂದು ವಾರ ಶೋಕಾಚರಣೆ:ರಾಷ್ಟ್ರವು ಖಂಡಿತವಾಗಿಯೂ ಒಗ್ಗೂಡಿದೆ. ಇದು ನಿಜವಾಗಿಯೂ ನಂಬಲಸಾಧ್ಯವಾದ ಪ್ರತಿಕ್ರಿಯೆ ಎಂದು ನೆರದಿದ್ದ ಜನ ಸಮೂಹವನ್ನು ಉಲ್ಲೇಖಿಸಿ ಕಿಂಗ್ ಚಾರ್ಲ್ಸ್ III ಹೇಳಿದ್ದಾರೆ. ರಾಜಮನೆತನವು ಇನ್ನೊಂದು ವಾರ ಶೋಕಾಚರಣೆ ಆಚರಿಸುತ್ತದೆ. ಯಾವುದೇ ಅಧಿಕೃತ ಕಾರ್ಯಕ್ರಮ ಕೈಗೊಳ್ಳುವ ನಿರೀಕ್ಷೆಯಿಲ್ಲ ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ.
ದಶಕದ ಹಿಂದೆಯೇ ಸಿದ್ಧವಾಗಿದ್ದ ಶವಪೆಟ್ಟಿಗೆ:ರಾಣಿ 2ನೇ ಎಲಿಜಬೆತ್ ಅವರ ಪಾರ್ಥಿವ ಶರೀರವಿಡುವ ಶವಪೆಟ್ಟಿಗೆಯನ್ನು ರಾಜಮನೆತನದ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ನಲ್ಲಿ ಬೆಳೆದಿದ್ದ ಓಕ್ ಮರ ಬಳಸಿ ನಿರ್ಮಿಸಿದ್ದು, ಅಂಚುಗಳಲ್ಲಿ ಲೆಡ್‌ನ ಹಾಳೆ ಅಳವಡಿಸಲಾಗಿತ್ತು. ಹೆನ್ರಿ ಸ್ಮಿತ್ ಅವರು ದಶಕದ ಹಿಂದೆಯೇ ಶವಪೆಟ್ಟಿಗೆ ನಿರ್ಮಿಸಿದ್ದರು.