ಅಂಕಾರಾ (ಟರ್ಕಿ):ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15,383 ಕ್ಕೆ ತಲುಪಿದೆ. ಇದರಲ್ಲಿ ಟರ್ಕಿಯಲ್ಲಿ 12,391 ಜನರು ಸಾವನ್ನಪ್ಪಿದ್ದರೆ, 2,992 ಮಂದಿ ಸಮಾಧಿಯಾಗಿದ್ದಾರೆ. ಒಟ್ಟಾರೆ 62,914 ಜನರು ಗಾಯಗೊಂಡಿದ್ದಾರೆ. ಇನ್ನೊಂದೆಡೆ ದುರಂತದಲ್ಲಿ ಓರ್ವ ಭಾರತೀಯ ನಾಪತ್ತೆಯಾಗಿದ್ದು, 10 ಮಂದಿ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರು ಸುರಕ್ಷಿತವಾಗಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ನಿರಂತರ ಯುದ್ಧದಿಂದಲೇ ಬಳಲಿದ್ದ ಸಿರಿಯಾದಲ್ಲೂ ಸಾವಿನ ಸಂಖ್ಯೆ ಏರುತ್ತಿದೆ. ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ 1,730 ಜನರು ಸಾವನ್ನಪ್ಪಿರುವುದು ಭೀಕರತೆಯನ್ನು ಹೆಚ್ಚಿಸಿದೆ. ಸರ್ಕಾರಿ ನಿಯಂತ್ರಿತ ಪ್ರದೇಶಗಳಲ್ಲಿ ಒಟ್ಟು 1,262 ಜನರು ಹತರಾಗಿದ್ದಾರೆ. 5,108 ಜನರು ಗಾಯಗೊಂಡಿದ್ದಾರೆ.
ಭೂಕಂಪನಕ್ಕೂ ಮುನ್ನ ಸಿದ್ಧತೆ ಕಷ್ಟ:ಇನ್ನೊಂದೆಡೆ ಭೂಕಂಪನವಾಗಿ ನಾಶವಾದ ಪ್ರದೇಶಗಳಿಗೆ ಭೇಟಿ ನೀಡಿದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ಸರ್ಕಾರದ ವೈಫಲ್ಯಗಳನ್ನು ಒಪ್ಪಿಕೊಂಡಿದ್ದಾರೆ. ಭೂಕಂಪ ವಿನಾಶಕಾರಿಯಾಗಿದೆ. ತೀವ್ರ ಸಾವು ನೋವು ಸಂಭವಿಸಿವೆ. ಮೊದಲೇ ವಿಪತ್ತನ್ನು ಗುರುತಿಸಿ ಸಿದ್ಧರಾಗಲು ಸಾಧ್ಯವಿಲ್ಲ. ನಾಗರಿಕರ ರಕ್ಷಣೆಗೆ ಕಟಿಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಹಾನಿಯಾದ ಪ್ರದೇಶಗಳಲ್ಲಿ 21 ಸಾವಿರ ರಕ್ಷಣಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವಶೇಷಗಳಡಿ ಸಿಲುಕಿದ ಜನರನ್ನು ರಕ್ಷಿಸಲು ಹರಸಾಹಸ ಮಾಡಲಾಗುತ್ತಿದೆ. ನಮ್ಮ ಕೆಲಸ ಸುಲಭವಾಗಿಲ್ಲ. ವಿದೇಶಗಳ ನೆರವಿನಿಂದ ಜನರ ರಕ್ಷಣೆ ಮಾಡಲಾಗುವುದು ಎಂದು ಹೇಳಿದರು.
ಮೂರು ತಿಂಗಳು ತುರ್ತು ಪರಿಸ್ಥಿತಿ:ಟರ್ಕಿಯ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಮೂರು ತಿಂಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ವಿನಾಶಕಾರಿ ಭೂಕಂಪಗಳ ನಂತರ ಟರ್ಕಿ ಏಳು ದಿನಗಳ ಶೋಕ ಆಚರಿಸುತ್ತಿದೆ. 13 ದಶಲಕ್ಷಕ್ಕೂ ಹೆಚ್ಚು ಜನರು ಭೂಕಂಪದಿಂದ ಬಾಧಿತರಾಗಿದ್ದಾರೆ. ಅಲೆಪ್ಪೊ, ಹಮಾ, ಹೋಮ್ಸ್, ಟಾರ್ಟಸ್ ಮತ್ತು ಲಟಾಕಿಯಾ ಸೇರಿದಂತೆ ಹಲವೆಡೆ ಭೂಕಂಪದ ಸಂತ್ರಸ್ತರಿಗೆ 100 ಕ್ಕೂ ಹೆಚ್ಚು ಆಶ್ರಯ ತಾಣಗಳನ್ನು ಸ್ಥಾಪಿಸಲಾಗಿದೆ.