ಟೋಕಿಯೊ(ಜಪಾನ್): ಟೋಕಿಯೊದಲ್ಲಿ ಮಹತ್ವದ ಕ್ವಾಡ್ ಶೃಂಗಸಭೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಕ್ವಾಡ್‌ನ ಪ್ರಯತ್ನಗಳು ಸ್ವತಂತ್ರ, ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಪ್ರೋತ್ಸಾಹಿಸುತ್ತಿವೆ. ಇದು ಪರಸ್ಪರ ನಂಬಿಕೆ ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ಹೊಸ ಭರವಸೆ ನೀಡುತ್ತಿದೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸುವುದು ನಮ್ಮೆಲ್ಲರ ಗುರಿ ಎಂದರು.
ಅತ್ಯಂತ ಕಡಿಮೆ ಸಮಯದಲ್ಲಿ ಕ್ವಾಡ್ ಪ್ರಪಂಚದಲ್ಲಿ ತನ್ನ ಸ್ಥಾನವನ್ನು ನಿರೂಪಿಸಿಕೊಂಡಿದೆ. ಇಂದು ವಿಸ್ತಾರವಾದ ವ್ಯಾಪ್ತಿ ಹೊಂದಿರುವ ಸಂಘಟನೆಯು ಪರಿಣಾಮಕಾರಿಯಾಗಿದೆ. ನಮ್ಮ ಪರಸ್ಪರ ನಂಬಿಕೆ ಮತ್ತು ನಮ್ಮ ನಿರ್ಣಯವು ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಹೊಸ ಶಕ್ತಿ, ಉತ್ಸಾಹ ತುಂಬುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕೋವಿಡ್-19 ಪ್ರತಿಕೂಲ ಪರಿಸ್ಥಿತಿಯನ್ನು ಸೃಷ್ಟಿಸಿದರೂ ಲಸಿಕೆ ವಿತರಣೆ, ಹವಾಮಾನ ವೈಪರೀತ್ಯ, ವಿಪತ್ತು ಪ್ರತಿಕ್ರಿಯೆ, ಆರ್ಥಿಕ ಸಹಕಾರ ಮತ್ತು ಇತರ ಕ್ಷೇತ್ರಗಳಲ್ಲಿ ನಮ್ಮ ನಡುವಿನ ಸಮನ್ವಯವನ್ನು ಮತ್ತಷ್ಟು ಹೆಚ್ಚಿಸಿತು. ಇದು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ನಿರೂಪಿಸಿದೆ ಎಂದು ಮೋದಿ ತಿಳಿಸಿದರು.