ನವದೆಹಲಿ :ಭಾರತದ ಖ್ಯಾತ ಶಟ್ಲರ್ ಪಿ.ವಿ. ಸಿಂಧು ಅವರು ಕ್ಯಾಲಿಫೋರ್ನಿಯಾದಲ್ಲಿ ನಡೆದ ಆಪಲ್ನ ಸಮಾರಂಭದಲ್ಲಿ ಸಿಇಒ ಟಿಮ್ ಕುಕ್ ಅವರನ್ನು ಭೇಟಿಯಾದರು. ಆಪಲ್ನ ಮುಂದಿನ ತಲೆಮಾರಿನ ಐಫೋನ್ಗಳನ್ನು ಮಂಗಳವಾರ ಈ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಅಮೆರಿಕದ ಕ್ಯುಪರ್ಟಿನೊದಲ್ಲಿರುವ ಕಂಪನಿಯ ಪ್ರಧಾನ ಕಚೇರಿಯಲ್ಲಿ ಈವೆಂಟ್ ನಡೆಯಿತು. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಮಾಹಿತಿ ಶೇರ್ ಮಾಡಿಕೊಂಡಿರುವ ಸಿಂದು, ಆಪಲ್ ಸಿಇಒ ಅವರೊಂದಿಗಿನ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ ಮತ್ತು ಈ ಕ್ಷಣವನ್ನು ಮರೆಯಲಾಗದು ಎಂದು ಕರೆದಿದ್ದಾರೆ. ಅಲ್ಲದೇ ಮುಂದಿನ ಭಾರತ ಭೇಟಿಯಲ್ಲಿ ಕುಕ್ ಅವರೊಂದಿಗೆ ಬ್ಯಾಡ್ಮಿಂಟನ್ ಆಡುವ ಪ್ರಸ್ತಾಪವನ್ನು ಸಹ ಮುಂದಿಟ್ಟಿದ್ದಾರೆ. "ಆಪಲ್ ಕ್ಯುಪರ್ಟಿನೊದಲ್ಲಿ ಮುಖ್ಯ ದಿನದಂದು ಟಿಮ್ ಕುಕ್ ಅವರನ್ನು ಭೇಟಿಯಾದ ಮರೆಯಲಾಗದ ಕ್ಷಣ! ನನಗೆ ಇಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು, ಟಿಮ್. ಅದ್ಭುತವಾದ ಆಪಲ್ ಪಾರ್ಕ್ ಅನ್ನು ನೋಡಲು ಮತ್ತು ನಿಮ್ಮನ್ನು ಭೇಟಿಯಾಗಲು ಸಂತೋಷವಾಗಿದೆ! ನೀವು ಮುಂದೆ ಭಾರತಕ್ಕೆ ಭೇಟಿ ನೀಡಿದಾಗ ಬ್ಯಾಡ್ಮಿಂಟನ್ ಆಡುವ ಪ್ರಸ್ತಾಪವನ್ನು ನಾನು ಸಂತೋಷದಿಂದ ತಮ್ಮ ಮುಂದೆ ಇಡುತ್ತಿದ್ದೇನೆ" ಎಂದು ಸಿಂಧು ಬರೆದಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ ಸಿಂಧು, ಕುಕ್ ಅವರೊಂದಿಗಿನ ಸಂವಾದದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ನಾವೀನ್ಯತೆ, ಉತ್ಸಾಹ, ಆಶ್ಚರ್ಯ ಮತ್ತು ಉತ್ತಮ ಸಂಭಾಷಣೆಯ ಭರವಸೆ ನೀಡುವ #appleನ ಮುಖ್ಯ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೇನೆ. ಧನ್ಯವಾದಗಳು ಟಿಮ್ ಕುಕ್" ಎಂದು ಈ ಚಿತ್ರಗಳಿಗೆ ಅವರು ಕ್ಯಾಪ್ಷನ್ ನೀಡಿದ್ದಾರೆ. ಆಪಲ್ ಮಂಗಳವಾರ ಹೊಸ ಐಫೋನ್ ಸರಣಿಯನ್ನು ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಎಂಬ ಹೊಸ ನಾಲ್ಕು ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದೆ.