ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಇನ್ನೇನು ಒಂದು ವರ್ಷವಾಗಲಿದೆ. ನ್ಯಾಟೋ ಪಡೆಗೆ ಸೇರುವುದರ ವಿರುದ್ಧ ರಷ್ಯಾದ ಈ ದಾಳಿ ಉಕ್ರೇನ್ ಅನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. "ಯುದ್ಧ ಆರಂಭಕ್ಕೂ ಮೊದಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನ್ನ ಮೇಲೆ ಕ್ಷಿಪಣಿ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು" ಎಂದು ಇಂಗ್ಲೆಂಡ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬಿಬಿಸಿಯ ಸಾಕ್ಷ್ಯಚಿತ್ರವೊಂದರಲ್ಲಿ ಆಘಾತಕಾರಿ ವಿಷಯ ಬಹಿರಂಗಪಡಿಸಿರುವ ಜಾನ್ಸನ್, 2022 ರ ಫೆಬ್ರವರಿಯಲ್ಲಿ ನಡೆದ ಫೋನ್ ಸಂಭಾಷಣೆಯ ವೇಳೆ ಪುಟಿನ್ ತನ್ನ ಮೇಲೆ ಕ್ಷಿಪಣಿ ದಾಳಿ ಮಾಡುವುದಾಗಿ ಹೇಳಿದ್ದ. "ಉಕ್ರೇನ್- ರಷ್ಯಾ ಮಧ್ಯೆ ಯುದ್ಧ ಪರಿಸ್ಥಿತಿ ಉಂಟಾದರೆ, ಅದು ಭೀಕರ ದುರಂತಗಳಿಗೆ ಕಾರಣವಾಗುತ್ತದೆ ಎಂದು ಪುಟಿನ್‌ಗೆ ತಿಳಿಸಿದಾಗ, ನಾನು ನಿಮ್ಮನ್ನು ನೋಯಿಸಲು ಬಯಸುವುದಿಲ್ಲ. ಒಂದೇ ಬಾರಿಗೆ ಕ್ಷಿಪಣಿಯಿಂದ ಉಡಾಯಿಸುವೆ ಅಥವಾ ಅಂತದ್ದೇ ಇನ್ನೇನಾದರೂ ಮಾಡುವೆ ಎಂದರು. ಇದು ನನ್ನಲ್ಲಿ ಗೊಂದಲ ಉಂಟು ಮಾಡಿತು" ಎಂದು ಹೇಳಿದ್ದಾರೆ.
ಬಿಬಿಸಿ ಚಿತ್ರಿಸಿರುವ ಡಾಕ್ಯುಮೆಂಟರಿಯು ಪ್ರಸಾರಕ್ಕೂ ಮೊದಲು ಇಂತಹ "ಬಾಂಬ್" ಹಾಕಿದೆ. "ನಾನು ಯುದ್ಧದಿಂದಾಗುವ ಪರಿಣಾಮಗಳ ಬಗ್ಗೆ ವಿವರಿಸುತ್ತಿದ್ದರೆ, ಪುಟಿನ್ ನನ್ನ ಮಾತುಗಳನ್ನು ತೇಲಿಸುತ್ತಿದ್ದರು. ಶಾಂತವಾಗಿಯೇ ಉತ್ತರಿಸುತ್ತಿದ್ದ ಅವರು, ನನ್ನ ಪ್ರಯತ್ನಗಳಿಗೆ ಕಿವಿಗೊಡಲಿಲ್ಲ" ಎಂಬುದು ಹೇಳಿಕೆಯಲ್ಲಿದೆ.
"ಉಕ್ರೇನ್ ಮೇಲೆ ಆಕ್ರಮಣ ಮಾಡುವುದರಿಂದ ಪಾಶ್ಚಿಮಾತ್ಯ ನಿರ್ಬಂಧಗಳಿಗೆ ಮತ್ತು ರಷ್ಯಾದ ಗಡಿಯಲ್ಲಿ ಹೆಚ್ಚಿನ ನ್ಯಾಟೋ ಪಡೆಗಳು ಠಿಕಾಣಿ ಹೂಡಲು ಕಾರಣರಾಗುತ್ತೀರಿ ಎಂದು ಪುಟಿನ್ ಅವರಿಗೆ ಎಚ್ಚರಿಕೆ ನೀಡಿದೆ. ಭವಿಷ್ಯದಲ್ಲಿ ಉಕ್ರೇನ್ ನ್ಯಾಟೋಗೆ ಸೇರುವುದಿಲ್ಲ ಎಂದು ಭರವಸೆ ನೀಡಿದ್ದೆ ಎಂದು ಪುಟಿನ್‌ಗೆ ಹೇಳುವ ಮೂಲಕ ರಷ್ಯಾದ ನಡೆಸಲಿರುವ ಮಿಲಿಟರಿ ಕ್ರಮವನ್ನು ತಡೆಯಲು ಪ್ರಯತ್ನಿಸಿದೆ. ಆದರೆ, ಈ ವೇಳೆ ಪುಟಿನ್ ಅತ್ಯಂತ ನಿರಾಸಕ್ತ ಮನೋಭಾವದಲ್ಲಿದ್ದರು" ಎಂದು ಬಿಬಿಸಿ ಸಾಕ್ಷ್ಯಚಿತ್ರ ಹೇಳಿದೆ.