ಮಾಸ್ಕೋ (ರಷ್ಯಾ):ಪ್ರಮುಖ ಸೇನಾ ನಾಯಕನನ್ನು ಉಕ್ರೇನ್ ಬಾಂಬ್ ಹಾಕಿ ಉಡಾಯಿಸಿದ ಬಳಿಕ ಕೆರಳಿರುವ ರಷ್ಯಾ, ಉಕ್ರೇನ್ ಮೇಲೆ ಯುದ್ಧ ತೀವ್ರಗೊಳಿಸಲು ಏನು ಮಾಡಬಾರದಿತ್ತೋ ಅದನ್ನು ಮಾಡಲು ಹೊರಟಿದೆ. ಸರ್ವನಾಶವನ್ನೇ ಸೃಷ್ಟಿಸುವ ಪರಮಾಣು ಬಾಂಬ್‌ಗಳನ್ನು ತನ್ನ ಗಡಿಯಲ್ಲಿರುವ ಮಿತ್ರರಾಷ್ಟ್ರವಾದ ಬೆಲಾರಸ್‌ಗೆ ಕಳುಹಿಸಿಕೊಟ್ಟಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ವತಃ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾಹಿತಿ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಮಾಸ್ಕೋದಿಂದ ಮೊದಲ ಬ್ಯಾಚ್ ಪರಮಾಣು ಶಸ್ತ್ರಾಸ್ತ್ರಗಳನ್ನು ಬೆಲಾರಸ್‌ಗೆ ಕಳುಹಿಸಲಾಗಿದೆ. ಬೇಸಿಗೆಯ ಅಂತ್ಯದ ವೇಳೆಗೆ ಉಳಿದ ಪರಮಾಣು ಬಾಂಬ್‌ಗಳನ್ನು ಗಡಿಗೆ ತಲುಪಿಸಬೇಕು ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾಗಿ ವರದಿಯಾಗಿದೆ.
ಯುದ್ಧದಲ್ಲಿ ಯಾವುದೇ ಕಾರಣಕ್ಕೂ ಪರಮಾಣುಗಳ ಬಳಕೆ ಮಾಡದಂತೆ ವಿಶ್ವವೇ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಇತ್ತ ರಷ್ಯಾ ನಿರ್ಬಂಧಗಳನ್ನೆಲ್ಲಾ ಗಾಳಿಗೆ ತೂರಿ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಗಡಿಯಲ್ಲಿ ಸಜ್ಜು ಮಾಡುತ್ತಿದೆ. ಸೇಂಟ್ ಪೀಟರ್ಸ್‌ಬರ್ಗ್ ಇಂಟರ್‌ನ್ಯಾಶನಲ್ ಎಕನಾಮಿಕ್ ಫೋರಮ್ ಅನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, ಬೆಲಾರಸ್‌ಗೆ ಮೊದಲು ಸುತ್ತಿನ ಪರಮಾಣು ಬಾಂಬ್‌ಗಳನ್ನು ಕಳುಹಿಸಿಕೊಡಲಾಗಿದೆ. ಬೇಸಿಗೆ ಮುಗಿಯುವ ವೇಳೆಗೆ ಇನ್ನಷ್ಟು ಶಸ್ತ್ರಾಸ್ತ್ರಗಳನ್ನು ಅಲ್ಲಿಗೆ ತಲುಪಲಿವೆ ಎಂದು ಹೇಳಿದ್ದಾರೆ.
ಉಕ್ರೇನ್ ಗಡಿಯಲ್ಲಿರುವ ಯುದ್ಧತಂತ್ರದ ಭಾಗವಾಗಿ ಪರಮಾಣು ಬಾಂಬ್‌ಗಳನ್ನು ನಿಯೋಜಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ರಷ್ಯಾ ಶಸ್ತ್ರಾಸ್ತ್ರಗಳನ್ನ ಕ್ರೋಢೀಕರಿಸುತ್ತಿದೆ. ಇದು ತನ್ನೆಲ್ಲ ಎದುರಾಳಿಗಳಿಗೆ ನೇರ ಸಂದೇಶ ರವಾನಿಸಿದೆ. ರಷ್ಯಾ ಮತ್ತು ಅದರ ಕಾರ್ಯತಂತ್ರದ ಸೋಲಿನ ಬಗ್ಗೆ ಯೋಚಿಸುವ ವಿರೋಧಿಗಳೆಲ್ಲರಿಗೂ ಇದು ಎಚ್ಚರಿಕೆಯ ಗಂಟೆ ಎಂದು ಪುಟಿನ್ ಹೇಳಿದ್ದಾರೆ.
ರಷ್ಯಾದ ಅಸ್ತಿತ್ವ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲೂ ದೇಶ ಸಿದ್ಧವಿದೆ. ದೇಶದ ರಾಜ್ಯತ್ವಕ್ಕೆ ಬೆದರಿಕೆಯಿದ್ದರೆ ತೀವ್ರತರವಾದ ಯಾವುದೇ ಹಾದಿಯನ್ನೂ ಬಳಸಲಾಗುತ್ತದೆ. ನಾವು ಖಂಡಿತವಾಗಿಯೂ ಎಲ್ಲಾ ಪಡೆಗಳನ್ನು ಬಳಸುತ್ತೇವೆ. ರಷ್ಯಾದ ತನಗಾಗಿ ಏನು ಬೇಕಾದರೂ ಮಾಡಲು ಸಜ್ಜಾಗಿರುತ್ತದೆ ಎಂದು ಪುಟಿನ್ ಗುಡುಗಿದ್ದಾರೆ.