ಕಠ್ಮಂಡು(ನೇಪಾಳ):ನೇಪಾಳದ ನೂತನ ಪ್ರಧಾನಿಯಾಗಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಪ್ರಮಾಣ ವಚನ ಸ್ವೀಕರಿಸಿದರು. ನಾಟಕೀಯ ಬೆಳವಣಿಗೆಗಳ ನಡುವೆ ಹೊಸ ಮೈತ್ರಿ ಮಾಡಿಕೊಂಡ ಪ್ರಚಂಡ ಮೂರನೇ ಬಾರಿಗೆ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಂಡರು. ರಾಷ್ಟ್ರಪತಿಗಳ ಅಧಿಕೃತ ನಿವಾಸ ಶೀತಲ್ ನಿವಾಸ್‌ನಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು.
ಪ್ರಧಾನಿ ಹುದ್ದೆ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಹಳೆ ಮೈತ್ರಿಕೂಟಕ್ಕೆ ಪ್ರಚಂಡ ಗುಡ್ ಬೈ ಹೇಳಿದ್ದರು. ಇದರಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಡಳಿತದಲ್ಲಿದ ಐದು ಪಕ್ಷಗಳಿಂದ ಕೂಡಿದ ಮೈತ್ರಿಕೂಟ ಸಮ್ಮಿಶ್ರ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ.
ಚುನಾವಣೆಗೆ ಮುನ್ನ ಮಾಜಿ ಪ್ರಧಾನಿ ದೇವುಬಾ ಮತ್ತು ಪ್ರಚಂಡ ಎರಡೂವರೆ ವರ್ಷಗಳ ಕಾಲ ಪ್ರಧಾನಿ ಹುದ್ದೆಯನ್ನು ಹಂಚಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಮೊದಲ ಎರಡೂವರೆ ವರ್ಷಗಳ ಕಾಲ ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಿದ ದೇವುಬಾ, ಪ್ರಚಂಡ ಅವರಿಗೆ ಅಧಿಕಾರ ಹಸ್ತಾಂತರಿಸುವ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.
ಹೀಗಾಗಿ ಅಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿ ಮೈತ್ರಿ ಮುರಿದು ಬಿದ್ದ ಪರಿಣಾಮ ಪ್ರಚಂಡ ಅವರು ತಮ್ಮ ಹಳೆಯ ಗೆಳೆಯ, ವಿರೋಧ ಪಕ್ಷದಲ್ಲಿದ್ದ ಮಾಜಿ ಪ್ರಧಾನಿ ಓಲಿ ಅವರನ್ನು ಸಂಪರ್ಕಿಸಿ ಬೆಂಬಲ ಕೋರಿದರು. ಒಲಿ ಇದಕ್ಕೆ ಒಪ್ಪಿಗೆ ಸೂಚಿಸಿದರು ಇದರಿಂದ 169 ಸದಸ್ಯರ ಬೆಂಬಲದೊಂದಿಗೆ ಪ್ರಚಂಡ ಸರ್ಕಾರ ರಚಿಸಿದ್ದಾರೆ, ಈ ಹಿನ್ನೆಲೆಯಲ್ಲಿ ಭಾನುವಾರ ಪ್ರಚಂಡ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ:ಸೆನ್ಸ್ಲೆಸ್ ರಷ್ಯಾ ಉಕ್ರೇನ್ ಯುದ್ಧ ನಿಲ್ಲಿಸಿ: ಪೋಪ್ ಫ್ರಾನ್ಸಿಸ್ ಕ್ರಿಸ್ಮಸ್ ಶಾಂತಿ ಸಂದೇಶ