ರಿಯೋ ಡಿ ಜನೈರೊ:ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಚುನಾವಣಾ ಸೋಲು ಒಪ್ಪಿಕೊಳ್ಳಲು ನಿರಾಕರಿಸಿರುವ ಅವರ ಬೆಂಬಲಿಗರು, ಎಡಪಂಥೀಯ ಪ್ರತಿಸ್ಪರ್ಧಿ ಹಾಗೂ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳ ನಂತರ ನಿನ್ನೆ (ಭಾನುವಾರ) ರಾಜಧಾನಿ ರಿಯೋ ಡಿ ಜನೈರೋದಲ್ಲಿರುವ ಕಾಂಗ್ರೆಸ್ ಕಚೇರಿ, ಸುಪ್ರೀಂ ಕೋರ್ಟ್ ಮತ್ತು ಅಧ್ಯಕ್ಷೀಯ ಅರಮನೆಗೆ ಮುತ್ತಿಗೆ ಹಾಕಿದ್ದಾರೆ. ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೈರ್ ಬೋಲ್ಸನಾರೊ ಸೋತ ನಂತರ ಮಿಲಿಟರಿ ದಂಗೆಗೆ ಒತ್ತಾಯಿಸುತ್ತಿರುವ ಬಲಪಂಥೀಯ ಬೆಂಬಲಿಗರು ದೇಶದಲ್ಲಿ ರಾಜಕೀಯ ಕ್ಷೋಭೆ ಉಂಟು ಮಾಡುತ್ತಿದ್ದಾರೆ. ರಸ್ತೆಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ ಒಳನುಗ್ಗಿದ ಸಾವಿರಾರು ಪ್ರತಿಭಟನಾಕಾರರು, ಕಾಂಗ್ರೆಸ್ ಕಚೇರಿ, ಸುಪ್ರೀಂ ಕೋರ್ಟ್ ಮತ್ತು ಅಧ್ಯಕ್ಷೀಯ ಅರಮನೆಯ ಕಿಟಕಿಗಳಿಗೆ ಹಾನಿಗೊಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳನ್ನು ಗಮನಿಸಿದಾಗ, ಪ್ರತಿಭಟನಾಕಾರರು ಅಧ್ಯಕ್ಷೀಯ ಅರಮನೆಯಲ್ಲಿ ತಿರುಗಾಡುತ್ತಿರುವುದನ್ನು ಕಾಣಬಹುದು. ಅವರಲ್ಲಿ ಹಲವರು ಹಸಿರು ಮತ್ತು ಹಳದಿ ಬಣ್ಣದ ಉಡುಪು ಧರಿಸಿ, ಧ್ವಜ ಹಿಡಿದು ನಿಂತಿದ್ದಾರೆ. ಈ ಬಣ್ಣಗಳು ಬೋಲ್ಸನಾರೊ ಸರ್ಕಾರವನ್ನು ಸಂಕೇತಿಸುತ್ತದೆ.
ಭಾನುವಾರದಂದು ಕಾಂಗ್ರೆಸ್ ಮತ್ತು ಸುಪ್ರೀಂ ಕೋರ್ಟ್ ಕಟ್ಟಡಗಳೊಳಗೆ ಸೀಮಿತ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ. ಮಾಹಿತಿ ಪ್ರಕಾರ, ಈಗಾಗಲೇ ಅನೇಕ ರಾಜಕೀಯ ವಿಶ್ಲೇಷಕರು ಮತ್ತು ನ್ಯಾಯಾಂಗ ಬೋಲ್ಸನಾರೊಗೆ ಎಚ್ಚರಿಕೆ ನೀಡಿದೆ. ಆದರೂ ದಾಳಿ ಮುಂದುವರೆದಿದೆ. ಈ ಘಟನೆಗಳು ಜನವರಿ 6ರಂದು ಯುಎಸ್ ಕ್ಯಾಪಿಟಲ್ ಆಕ್ರಮಣವನ್ನು ನೆನಪಿಸುತ್ತದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 30ರಿಂದ ಪ್ರಾರಂಭವಾದ ಪ್ರತಿಭಟನೆ:ಲುಲಾ ಗೆಲುವಿನ ವಿರುದ್ಧ ಬೋಲ್ಸನಾರೊ ಬೆಂಬಲಿಗರು ಅಕ್ಟೋಬರ್ 30ರಿಂದ ಪ್ರತಿಭಟಿಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ರಸ್ತೆ ಸಂಚಾರವನ್ನು ನಿರ್ಬಂಧಿಸಿ, ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಅಷ್ಟೇ ಅಲ್ಲದೇ, ಚುನಾವಣಾ ಫಲಿತಾಂಶ ಮೋಸದಿಂದ ಕೂಡಿದ್ದು, ವಿಶ್ವಾಸಾರ್ಹವಾಗಿಲ್ಲ. ಕೂಡಲೇ ಸಶಸ್ತ್ರ ಪಡೆಗಳು ಮಧ್ಯಪ್ರವೇಶಿಸ ಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ.
ಸೆನೆಟ್ ಅಧ್ಯಕ್ಷ ರೊಡ್ರಿಗೋ ಪಚೆಕೊ ಅವರು ಬ್ರೆಸಿಲಿಯಾ ಗವರ್ನರ್ ಇಬಾನೆಸ್ ರೋಚಾ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್ ಪಡೆ ಸಜ್ಜುಗೊಳಿಸಲಾಗಿದೆ. ಸದ್ಯದಲ್ಲೇ ಎಲ್ಲಾ ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇನ್ನೊಂದೆಡೆ, ಲೂಯಿಸ್ ಇನಾಸಿಯೊ ಲುಲಾ ಡಾ ಸಿಲ್ವಾ ಅಧಿಕಾರ ವಹಿಸಿಕೊಳ್ಳುವ ಮುಂಚಿತವಾಗಿಯೇ ಜೈರ್ ಬೋಲ್ಸನಾರೊ ಯುಎಸ್‌ಗೆ ತೆರಳಿದ್ದಾರೆ. ಸದ್ಯಕ್ಕೆ ದೇಶದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಕುರಿತು ಯಾವುದೇ ಪ್ರತಿಕ್ರಿಯೆ ಅಥವಾ ಖಂಡನೆ ವ್ಯಕ್ತಪಡಿಸಿಲ್ಲ.
ಇದನ್ನೂ ಓದಿ:ಬ್ರೆಜಿಲ್: ದಶಕಗಳ ನಂತರ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಲುಲಾ ಡಾ ಸಿಲ್ವಾ
ವಿಶ್ವಸಂಸ್ಥೆ, ಅಮೆರಿಕ ಖಂಡನೆ: ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಬೆಂಬಲಿಗರು ದೇಶದ ಕಾಂಗ್ರೆಸ್, ಅಧ್ಯಕ್ಷೀಯ ಭವನ ಮತ್ತು ಸುಪ್ರೀಂ ಕೋರ್ಟ್‌ಗೆ ನುಗ್ಗಿರುವುದನ್ನು ಯುಎಸ್ ಅಧ್ಯಕ್ಷ ಜೋ ಬೈಡನ್ ಖಂಡಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ. ದೇಶದ ಜನರ ಇಚ್ಛೆಗೆ ಧಕ್ಕೆಯಾಗಬಾರದು, ಬ್ರೆಜಿಲ್‌ನ ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಯುನೈಟೆಡ್ ಸ್ಟೇಟ್ಸ್‌ನ ಸಂಪೂರ್ಣ ಬೆಂಬಲವಿದೆ ಎಂದು ಟ್ವೀಟ್‌ನಲ್ಲಿ ಒತ್ತಿ ಹೇಳಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಸಹ 'ಬ್ರೆಜಿಲ್‌ನ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ದಾಳಿ' ಎಂದು ಖಂಡಿಸಿದ್ದಾರೆ. ಬ್ರೆಜಿಲಿಯನ್ ಜನರು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಇಚ್ಛೆಯನ್ನು ಗೌರವಿಸಬೇಕು ಎಂದು ಒತ್ತಿ ಹೇಳಿದ್ದಾರೆ.