ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದಲ್ಲಿ ವಿನಾಶಕಾರಿ ಪ್ರವಾಹದಿಂದ ಉಂಟಾದ ಮಾನವ ಮತ್ತು ಆಸ್ತಿಪಾಸ್ತಿ ನಷ್ಟದ ಬಗ್ಗೆ ಕಾಳಜಿ ತೋರಿದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ಧನ್ಯವಾದ ಅರ್ಪಿಸಿದ್ದಾರೆ. ತಮ್ಮ ದೇಶವು ನೈಸರ್ಗಿಕ ವಿಕೋಪದ ಸಂಕಷ್ಟದಿಂದ ಶೀಘ್ರವೇ ಹೊರಬರಲಿದೆ ಎಂದು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿಯೇ ಅತಿ ಹೆಚ್ಚು ಪ್ರಮಾಣದ ಮಾನ್ಸೂನ್ ಮಳೆಯಿಂದ ಉಂಟಾದ ಪ್ರವಾಹ ಪಾಕಿಸ್ತಾನದಾದ್ಯಂತ ವ್ಯಾಪಕ ಹಾನಿಯನ್ನುಂಟುಮಾಡಿದೆ. 1,100 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದು, 33 ಮಿಲಿಯನ್ ಅಥವಾ ದೇಶದ ಜನಸಂಖ್ಯೆಯ ಏಳನೇ ಒಂದು ಭಾಗದಷ್ಟು ಜನ ಸ್ಥಳಾಂತರಗೊಂಡಿದ್ದಾರೆ.
“ಪ್ರವಾಹದಿಂದ ಉಂಟಾದ ಮಾನವ ಜೀವನ ಮತ್ತು ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ಸಂತಾಪ ಸೂಚಿಸಿದ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಧನ್ಯವಾದಗಳು. ಪಾಕಿಸ್ತಾನದ ಜನರು ತಾವು ಹೊಂದಿರುವ ವಿಶಿಷ್ಟ ಸಹನಶೀಲ ಗುಣದಿಂದ ಈ ನೈಸರ್ಗಿಕ ವಿಕೋಪದ ವ್ಯತಿರಿಕ್ತ ಪರಿಣಾಮಗಳಿಂದ ಹೊರಬರಲಿದ್ದಾರೆ ಮತ್ತು ಅವರು ತಮ್ಮ ಜೀವನ ಮತ್ತು ಸಮುದಾಯಗಳನ್ನು ಪುನರ್ ನಿರ್ಮಿಸಲಿದ್ದಾರೆ, ಇನ್ಶಾ ಅಲ್ಲಾಹ್” ಎಂದು ಷರೀಫ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಪ್ರವಾಹದಿಂದ ಉಂಟಾದ ವಿನಾಶವನ್ನು ನೋಡಿ ದುಃಖಿತನಾಗಿದ್ದೇನೆ ಮತ್ತು ಶೀಘ್ರದಲ್ಲೇ ಸಹಜ ಸ್ಥಿತಿಯ ಮರುಸ್ಥಾಪನೆಯನ್ನು ಆಶಿಸುತ್ತೇನೆ ಎಂದು ಪ್ರಧಾನಿ ಮೋದಿ ಸೋಮವಾರ ಹೇಳಿದ್ದರು.
"ಪಾಕಿಸ್ತಾನದಲ್ಲಿ ಪ್ರವಾಹದಿಂದ ಉಂಟಾದ ವಿನಾಶವನ್ನು ನೋಡಿ ದುಃಖವಾಗಿದೆ. ಸಂತ್ರಸ್ತ ಕುಟುಂಬಗಳು, ಗಾಯಾಳುಗಳಿಗೆ ನಾವು ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಮತ್ತು ಸಹಜ ಸ್ಥಿತಿಯ ಶೀಘ್ರ ಮರುಸ್ಥಾಪನೆಗಾಗಿ ಆಶಿಸುತ್ತೇವೆ" ಎಂದು ಮೋದಿ ಟ್ವೀಟ್ ಮಾಡಿದ್ದರು.
ಪಾಕಿಸ್ತಾನದಲ್ಲಿ ಮಾನ್ಸೂನ್ ಮಳೆಯಿಂದ ಉಂಟಾದ ಪ್ರವಾಹವು ತೀವ್ರ ವಿನಾಶವನ್ನು ಉಂಟುಮಾಡಿದೆ. ಪ್ರವಾಹದಿಂದ ಪಾಕಿಸ್ತಾನದ ಮೂರನೇ ಒಂದು ಭಾಗವು ಮುಳುಗಿದೆ. ಪ್ರವಾಹದಿಂದ ಸಂತ್ರಸ್ತರಾಗಿರುವ ಲಕ್ಷಾಂತರ ಜನರಿಗೆ ಸಹಾಯ ಮಾಡಲು ಮಂಗಳವಾರ ಪಾಕಿಸ್ತಾನದಾದ್ಯಂತ ನೆರವಿನ ಪ್ರಯತ್ನಗಳನ್ನು ತೀವ್ರಗೊಳಿಸಲಾಗಿದೆ. ಮಾಹಿತಿಯ ಪ್ರಕಾರ, ದೇಶದಲ್ಲಿ ಇದುವರೆಗೆ 1,100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೇಶಾದ್ಯಂತ ಹಾನಿಗೊಳಗಾದ ಮೂಲಸೌಕರ್ಯವನ್ನು ಸರಿಪಡಿಸಲು ಕನಿಷ್ಠ 10 ಶತಕೋಟಿ ಡಾಲರ್ ವೆಚ್ಚವಾಗಲಿದೆ ಎಂದು ಪ್ರಧಾನಿ ಶೆಹಬಾಜ್ ಹೇಳಿದ್ದಾರೆ.
ಪಾಕಿಸ್ತಾನದ ಪ್ರವಾಹದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದು, ಪಾಕಿಸ್ತಾನದಲ್ಲಿನ ಸದ್ಯದ ಪ್ರವಾಹ ಭಾರಿ ದೊಡ್ಡ ಬಿಕ್ಕಟ್ಟು ಎಂದಿದ್ದಾರೆ.
ಟರ್ಕಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಪರಿಹಾರ ಸಾಮಗ್ರಿಗಳನ್ನು ಹೊತ್ತ ವಿಮಾನಗಳು ಪಾಕಿಸ್ತಾನಕ್ಕೆ ಆಗಮಿಸಿವೆ. ಕೆನಡಾ, ಆಸ್ಟ್ರೇಲಿಯಾ ಮತ್ತು ಜಪಾನ್ ಸೇರಿದಂತೆ ಇತರ ದೇಶಗಳು ಸಹ ಸಹಾಯದ ವಾಗ್ದಾನ ಮಾಡಿವೆ. ವಿಶ್ವಸಂಸ್ಥೆಯು ಮಂಗಳವಾರ ಔಪಚಾರಿಕವಾಗಿ 160 ಮಿಲಿಯನ್ ಡಾಲರ್ ತುರ್ತು ಸಹಾಯ ಬಿಡುಗಡೆ ಮಾಡಿದೆ.