ಕೈರೋ (ಈಜಿಪ್ಟ್) : ಪ್ರಧಾನಿ ನರೇಂದ್ರ ಮೋದಿಯವರಿಗೆ ಈಜಿಪ್ಟ್‌ನ ಅತ್ಯುನ್ನತ ರಾಜ್ಯ ಗೌರವವಾದ 'ಆರ್ಡರ್ ಆಫ್ ದಿ ನೈಲ್' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ ಸಿಸಿ ಅವರು ಭಾನುವಾರ ಪ್ರಧಾನಿ ಮೋದಿಯವರಿಗೆ ಕೈರೋದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಇದು ಪ್ರಪಂಚದಾದ್ಯಂತದ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡಿದ 13 ನೇ ಅತ್ಯುನ್ನತ ಸರ್ಕಾರಿ ಗೌರವವಾಗಿದೆ ಮತ್ತು ಇದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ.
ಕಳೆದ ಒಂಬತ್ತು ವರ್ಷಗಳ ಅಧಿಕಾರಾವಧಿಯಲ್ಲಿ, ಪಿಎಂ ಮೋದಿ ಅವರು ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಲೋಗೊಹು, ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ ಮತ್ತು ರಿಪಬ್ಲಿಕ್ ಆಫ್ ಪಲಾವು ಇದರ ಎಬಾಕಲ್ ಪ್ರಶಸ್ತಿ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಏತನ್ಮಧ್ಯೆ, ಪ್ರಧಾನಿ ಮೋದಿ, ಈಜಿಪ್ಟ್ ಅಧ್ಯಕ್ಷ ಎಲ್ ಸಿಸಿ ಭಾನುವಾರ ಈಜಿಪ್ಟ್‌ನ ಕೈರೋದಲ್ಲಿ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದರು.
ಈಜಿಪ್ಟ್‌ನ ಕೈರೋದಲ್ಲಿರುವ ಹೆಲಿಯೊಪೊಲಿಸ್ ಯುದ್ಧ ಸ್ಮಶಾನಕ್ಕೆ ಭಾನುವಾರ ಭೇಟಿ ನೀಡಿದ ಪ್ರಧಾನಿ, ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಅತ್ಯುನ್ನತ ತ್ಯಾಗ ಬಲಿದಾನ ಮಾಡಿದ ಭಾರತೀಯ ಯೋಧರಿಗೆ ಗೌರವ ಸಲ್ಲಿಸಿದರು. ಅಲ್ಲದೆ ಪ್ರಧಾನಿ ಭಾನುವಾರ ಕೈರೋದ ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಿದರು. ಅಲ್-ಹಕೀಮ್ ಮಸೀದಿಯು ಈಜಿಪ್ಟ್‌ನ ಕೈರೋದಲ್ಲಿರುವ 11 ನೇ ಶತಮಾನದ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣವಾಗಿದೆ. ಭಾರತ ಮತ್ತು ಈಜಿಪ್ಟ್ ಹಂಚಿಕೊಂಡಿರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಈ ಮಸೀದಿಯು ಸಾಕ್ಷಿಯಾಗಿದೆ.
ಅಲ್-ಹಕೀಮ್ ಮಸೀದಿ ಶತಮಾನಗಳ ಹಳೆಯ ಪರಂಪರೆಯೊಂದಿಗೆ, ಭಾರತೀಯ ಮತ್ತು ಈಜಿಪ್ಟ್ ಸಂಸ್ಕೃತಿಗಳ ಮಿಲನವನ್ನು ಪ್ರದರ್ಶಿಸುವ ಧಾರ್ಮಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸಂಕೇತವಾಗಿದೆ. ಪ್ರಧಾನಿ ಮೋದಿ ಜೂನ್ 24-25 ರವರೆಗೆ ಈಜಿಪ್ಟ್‌ಗೆ ಅಧಿಕೃತ ಪ್ರವಾಸ ಕೈಗೊಂಡಿದ್ದಾರೆ.