ಮಾಸ್ಕೋ (ರಷ್ಯಾ) : ಜೂನ್ನಲ್ಲಿ ರಷ್ಯಾ ಸೇನೆಯ ವಿರುದ್ಧ ವ್ಯಾಗ್ನರ್ ಬಂಡುಕೋರ ಸೈನ್ಯದ ವಿಫಲ ದಂಗೆಯ ನಂತರ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಇದೇ ಮೊದಲ ಬಾರಿಗೆ ವಿಡಿಯೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಮೂಲಕ ತಮ್ಮ ಭಾಷಣ ಬಿಡುಗಡೆ ಮಾಡಿರುವ ಅವರು ಪ್ರಸ್ತುತ ಆಫ್ರಿಕಾದಲ್ಲಿದ್ದಾರೆ ಎಂದು ತಿಳಿದು ಬಂದಿದೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
ಖಾಸಗಿ ಸಶಸ್ತ್ರ ಸೇನೆಯಾದ ವ್ಯಾಗ್ನರ್ ಗ್ರೂಪ್ನ ಟೆಲಿಗ್ರಾಮ್ ಚಾನೆಲ್ಗಳಲ್ಲಿ ಪ್ರಿಗೋಜಿನ್ ಅವರ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದ ಸತ್ಯಾಸತ್ಯತೆಯ ಬಗ್ಗೆ ಇನ್ನೂ ಪರಿಶೀಲನೆ ಮಾಡಲು ಸಾಧ್ಯವಾಗಿಲ್ಲ. ವಿಡಿಯೋದಲ್ಲಿ ಯುದ್ಧ ಉಡುಗೆಯಲ್ಲಿ ಪ್ರಿಗೋಜಿನ್ ಕಾಣಿಸಿಕೊಂಡಿದ್ದಾರೆ. ಆಫ್ರಿಕಾವನ್ನು ಇನ್ನಷ್ಟು ಸ್ವತಂತ್ರಗೊಳಿಸುತ್ತಿದ್ದೇವೆ ಎಂದು ಪ್ರಿಗೋಜಿನ್ ವಿಡಿಯೋದಲ್ಲಿ ಹೇಳಿದ್ದಾರೆ.
ವ್ಯಾಗ್ನರ್ ಗ್ರೂಪ್ ಆಫ್ರಿಕಾದಲ್ಲಿನ ಖನಿಜ ಸಂಪತ್ತುಗಳನ್ನು ಹುಡುಕುತ್ತಿದೆ ಮತ್ತು ಮತ್ತು ಇಸ್ಲಾಮಿಕ್ ಉಗ್ರಗಾಮಿಗಳು ಮತ್ತು ಇತರ ಅಪರಾಧಿಗಳ ವಿರುದ್ಧ ಹೋರಾಡುತ್ತಿದೆ ಎಂದು ಪ್ರಿಗೋಜಿನ್ ಹೇಳಿದ್ದಾರೆ. "ಇಲ್ಲಿ +50 ಡಿಗ್ರಿ ಉಷ್ಣಾಂಶದ ಮಧ್ಯೆ ನಾವು ಕೆಲಸ ಮಾಡುತ್ತಿದ್ದೇವೆ. ವ್ಯಾಗ್ನರ್ ಪಿಎಂಸಿ ಬೇಹುಗಾರಿಕೆ ಮತ್ತು ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ನಾವು ರಷ್ಯಾವನ್ನು ಎಲ್ಲರಿಗಿಂತ ಶಕ್ತಿಶಾಲಿ ಖಂಡವನ್ನಾಗಿ ಮಾಡುತ್ತಿದ್ದೇವೆ ಮತ್ತು ಆಫ್ರಿಕಾವನ್ನು ಮತ್ತಷ್ಟು ಮುಕ್ತಗೊಳಿಸುತ್ತೇವೆ" ಎಂದು ಪ್ರಿಗೋಜಿನ್ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.
"ಆಫ್ರಿಕನ್ ಜನರಿಗೆ ನ್ಯಾಯ ಮತ್ತು ನೆಮ್ಮದಿ ನೀಡುವುದು ನಮ್ಮ ಗುರಿ. ಐಸಿಸ್ (ಇಸ್ಲಾಮಿಕ್ ಸ್ಟೇಟ್) ಮತ್ತು ಅಲ್ ಖೈದಾ ಮತ್ತು ಇತರ ಉಗ್ರಗಾಮಿಗಳ ಜೀವನವನ್ನು ನಾವು ನರಕವಾಗಿಸುತ್ತಿದ್ದೇವೆ. ವ್ಯಾಗ್ನರ್ ಗ್ರೂಪ್ ಮತ್ತಷ್ಟು ಸೈನಿಕರನ್ನು ನೇಮಕ ಮಾಡಿಕೊಳ್ಳುತ್ತಿದೆ ಮತ್ತು ನಿಗದಿಪಡಿಸಿದ ಕಾರ್ಯಗಳನ್ನು ಪೂರೈಸುವುದನ್ನು ಮುಂದುವರಿಸುತ್ತದೆ. ನಾವು ಇದರಲ್ಲಿ ಯಶಸ್ವಿಯಾಗುತ್ತೇವೆ ಎಂದು ಭರವಸೆ ನೀಡುತ್ತೇವೆ" ಎಂದು ಪ್ರಿಗೋಜಿನ್ ವಿಡಿಯೋದಲ್ಲಿ ಹೇಳಿದ್ದಾರೆ.
ಪ್ರಿಗೋಜಿನ್ ಜುಲೈ 19 ರಂದು ಬೆಲಾರಸ್ನಲ್ಲಿ ಕೊನೆಯ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಅಸಿಪೊವಿಚಿಯಲ್ಲಿನ ಸೇನಾ ನೆಲೆಯಲ್ಲಿ ವ್ಯಾಗ್ನರ್ ಗ್ರೂಪ್ ಹೋರಾಟಗಾರರನ್ನು ಸ್ವಾಗತಿಸುವ ವಿಡಿಯೋದಲ್ಲಿ ಅವರು ಕಾಣಿಸಿದ್ದರು. ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ವ್ಯಾಗ್ನರ್ ದಂಗೆಯ ನಂತರ, ವ್ಯಾಗ್ನರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರು ಪುಟಿನ್ ಅವರ ಮನವೊಲಿಸಿದ್ದರು. ಈ ಸಂಧಾನದ ನಂತರ ವ್ಯಾಗ್ನರ್ ಬಂಡಾಯ ತಣ್ಣಗಾಗಿತ್ತು.
ಪ್ರಿಗೋಜಿನ್ ಅವರಿಂದ ಕಟ್ಟಲಾದ ವ್ಯಾಗ್ನರ್ ಖಾಸಗಿ ಸೇನೆಯು ಉಕ್ರೇನ್ ಸೇರಿದಂತೆ ರಷ್ಯಾ ಹಿತಾಸಕ್ತಿಯ ಹಲವಾರು ಸಶಸ್ತ್ರ ಹೋರಾಟಗಳಲ್ಲಿ ಭಾಗವಹಿಸಿದೆ. ಮಾಲಿ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ (ಸಿಎಆರ್), ಸುಡಾನ್, ಲಿಬಿಯಾ, ಮೊಜಾಂಬಿಕ್, ಉಕ್ರೇನ್ ಮತ್ತು ಸಿರಿಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಪ್ರಿಗೋಜಿನ್ ಸೈನಿಕರು ಹೋರಾಟ ನಡೆಸುತ್ತಿದ್ದಾರೆ. 2022 ರಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ಸಮಯದಲ್ಲಿ ಉಕ್ರೇನ್ ನಗರಗಳಾದ ಸೋಲೆದಾರ್ ಮತ್ತು ಬಖ್ಮುತ್ಗಳನ್ನು ವಶಪಡಿಸಿಕೊಳ್ಳುವಲ್ಲಿ ವ್ಯಾಗ್ನರ್ ಪಡೆಗಳು ಪ್ರಮುಖ ಪಾತ್ರ ವಹಿಸಿದ್ದವು.
ಇದನ್ನೂ ಓದಿ : ಫುಕುಶಿಮಾ ಅಣು ತ್ಯಾಜ್ಯ ನೀರು ಗುರುವಾರದಿಂದ ಸಮುದ್ರಕ್ಕೆ ಬಿಡುಗಡೆ: ದೇಶ - ವಿದೇಶಗಳಲ್ಲಿ ಆತಂಕ!