ಕರ್ನಾಟಕ

karnataka

ETV Bharat / international

ರಾಷ್ಟ್ರಪತಿ ದ್ರೌಪದಿ ಮುರ್ಮುರಿಗೆ ಸುರಿನೇಮ್​ 'ಅತ್ಯುನ್ನತ ನಾಗರಿಕ ಪ್ರಶಸ್ತಿ' ಪ್ರದಾನ - President Draupadi Murmu

ದಕ್ಷಿಣ ಅಮೆರಿಕದ ರಾಷ್ಟ್ರವಾದ ಸುರಿನೇಮ್​ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು

By

Published : Jun 6, 2023, 9:54 AM IST

ನವದೆಹಲಿ:ಸುರಿನೇಮ್​ ದೇಶ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್' ಅನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೀಡಿ ಗೌರವಿಸಿದೆ. ಇದು ಮುರ್ಮು ಅವರು ರಾಷ್ಟ್ರಪತಿಗಳಾದ ಬಳಿಕದ ಮೊದಲ ವಿದೇಶ ಪ್ರವಾಸವಾಗಿದೆ. ಜೂನ್​ 4ರಿಂದ ಮೂರು ದಿನಗಳ ಪ್ರವಾಸದಲ್ಲಿರುವ ಅವರಿಗೆ ಸುರಿನೇಮ್​ನ ಅತ್ಯುನ್ನತ ಗೌರದ ಸಂದಿದೆ.

ದಕ್ಷಿಣ ಅಮೆರಿಕದ ಚಿಕ್ಕ ರಾಷ್ಟ್ರವಾದ ಸುರಿನೇಮ್​​ಗೆ ಭೇಟಿ ನೀಡಿರುವ ಮುರ್ಮು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಇದೇ ವೇಳೆ, ಉಭಯ ದೇಶಗಳ ನಡುವೆ ಹಲವು ಒಪ್ಪಂದಗಳೂ ನಡೆದು ಅಧ್ಯಕ್ಷರು ಸಹಿ ಹಾಕಿದರು.

ಸುರಿನೇಮ್​ ಅತ್ಯುನ್ನತ ಗೌರವವನ್ನು ಪಡೆದ ಚಿತ್ರಗಳನ್ನು ರಾಷ್ಟ್ರಪತಿ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಸುರಿನೇಮ್​ನ ಅತ್ಯುನ್ನತ ಪ್ರಶಸ್ತಿಯಾದ ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್ ಅನ್ನು ಸ್ವೀಕರಿಸಿರುವುದು ದೊಡ್ಡ ಗೌರವ ತಂದಿದೆ. ಈ ಮನ್ನಣೆಯು ನನಗೆ ಮಾತ್ರವಲ್ಲದೆ ನಾನು ಪ್ರತಿನಿಧಿಸುವ ಭಾರತದ 140 ಕೋಟಿ ಜನರಿಗೆ ಸಂದ ಗೌರವವಾಗಿದೆ. ನಾನು ಈ ಗೌರವವನ್ನು ಭಾರತೀಯ-ಸುರಿನೇಮ್​ ರಾಷ್ಟ್ರಗಳ ಸಂಬಂಧಗಳಿಗೆ ಶ್ರಮಿಸುವ ವರ್ಗಕ್ಕೆ ಅರ್ಪಿಸುವೆ' ಎಂದು ಬರೆದುಕೊಂಡಿದ್ದಾರೆ.

ಸುರಿನೇಮ್​ಗೆ ಭಾರತೀಯರ ಆಗಮನದ 150 ನೇ ವಾರ್ಷಿಕೋತ್ಸವದ ವೇಳೆ ಈ ಗೌರವ ಸ್ವೀಕರಿಸಿರುವುದು ವಿಶೇಷವಾಗಿದೆ. ಈ ಗೌರವವು ನಮ್ಮ ಎರಡೂ ದೇಶಗಳಲ್ಲಿನ ಮಹಿಳೆಯರ ಸಬಲೀಕರಣ ಮತ್ತು ಪ್ರೋತ್ಸಾಹದ ದಾರಿದೀಪವಾಗಿ ಕಾರ್ಯನಿರ್ವಹಿಸಿದರೆ ಇದಕ್ಕೆ ಇನ್ನಷ್ಟು ಅರ್ಥ ಬರಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಳಿದ್ದಾರೆ.

ವೈದ್ಯಕೀಯ ಉತ್ಪನ್ನ, ಉತ್ತಮ ಅಭ್ಯಾಸಗಳ ವಿನಿಮಯ ಮತ್ತು ಔಷಧಗಳು ಮತ್ತು ಔಷಧ ನಿಯಂತ್ರಕಗಳಿಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳ ಒಪ್ಪಂದಕ್ಕೆ ಉಭಯ ರಾಷ್ಟ್ರಗಳ ಮುಖ್ಯಸ್ಥರು ಸಹಿ ಹಾಕಿದರು. ಮೂರು ದಿನಗಳ ಪ್ರವಾಸದಲ್ಲಿರುವ ಭಾರತದ ರಾಷ್ಟ್ರಪತಿಗಳು ಇಂದು ಸುರಿನೇಮ್​ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸುವರು.

ನಾಳೆ ಸರ್ಬಿಯಾಕ್ಕೆ ಪ್ರವಾಸ:ರಾಷ್ಟ್ರಪತಿ ಮುರ್ಮು ಅವರ ಸುರಿನೇಮ್​ಗೆ ಮೂರು ದಿನಗಳ ಭೇಟಿ ನಾಳೆ ಮುಗಿಯಲಿದ್ದು, ಬಳಿಕ ಸರ್ಬಿಯಾಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಉಭಯ ರಾಷ್ಟ್ರಗಳ ಮುಖ್ಯಸ್ಥರು ಇದೇ ಮೊದಲ ಬಾರಿಗೆ ಭೇಟಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸರ್ಬಿಯಾದಲ್ಲಿ ಮುರ್ಮು ಅವರು ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನ ಮಂತ್ರಿ ಅನಾ ಬ್ರನಾಬಿಕ್ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ವ್ಲಾಡಿಮಿರ್ ಓರ್ಲಿಕ್ ಅವರನ್ನು ಭೇಟಿ ಮಾಡಲಿದ್ದಾರೆ. ಇದಾದ ಬಳಿಕ ಮುರ್ಮು ಅವರು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ. ಇದಾದ ಬಳಿಕ ಅವರು ಭಾರತಕ್ಕೆ ವಾಪಸ್​ ಆಗಲಿದ್ದಾರೆ.

ಇದನ್ನೂ ಓದಿ:ಭಾರತ ಒಂದು ಅದ್ಭುತ ಪ್ರಜಾಪ್ರಭುತ್ವ: ಮೋದಿ ಭೇಟಿಗೂ ಮುನ್ನ ಅಮೆರಿಕ ಹೊಗಳಿಕೆ

ABOUT THE AUTHOR

...view details