ಕ್ವಿಟೊ, ಈಕ್ವೆಡಾರ್:ಭ್ರಷ್ಟಾಚಾರ ಮತ್ತು ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಧ್ವನಿ ಎತ್ತಿದ್ದ ಈಕ್ವೆಡಾರ್ ಅಧ್ಯಕ್ಷೀಯ ಅಭ್ಯರ್ಥಿ ಫರ್ನಾಂಡೊ ವಿಲ್ಲಾವಿಸೆನ್ಸಿಯೋ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಚುನಾವಣಾ ರ‍್ಯಾಲಿ ಮುಗಿಸಿಕೊಂಡು ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದು ದಕ್ಷಿಣ ಅಮೆರಿಕದ ದೇಶದಲ್ಲಿ ಸಂಚನಲ ಮೂಡಿಸಿದೆ.
ದಕ್ಷಿಣ ಅಮೆರಿಕ ದೇಶವಾದ ಈಕ್ವೆಡಾರ್ನಲ್ಲಿ ಸದ್ಯ ಹಿಂಸಾಚಾರ, ಮಾದಕವಸ್ತು ಕಳ್ಳಸಾಗಣೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇದರ ವಿರುದ್ಧ ಮಾತನಾಡುತ್ತಿದ್ದ ಅಧ್ಯಕ್ಷೀಯ ಅಭ್ಯರ್ಥಿಯನ್ನು ಹತ್ಯೆ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಚುನಾವಣಾ ರ‍್ಯಾಲಿ ಬಳಿಕ ಶೂಟೌಟ್:ಈಕ್ವೆಡಾರ್ ರಾಷ್ಟ್ರಪತಿ ಸ್ಥಾನಕ್ಕೆ ಇದೇ ಆಗಸ್ಟ್ 20 ರಂದು ಚುನಾವಣೆ ನಡೆಯಲಿದೆ. ಹತ್ಯೆಗೀಡಾದ ಅಭ್ಯರ್ಥಿ ಫರ್ನಾಂಡೊ ಅವರು ಮಾದಕವಸ್ತು ಕಳ್ಳಸಾಗಣೆ ವಿರುದ್ಧ ತೀವ್ರ ಧ್ವನಿ ಎತ್ತಿದ್ದರು. ಚುನಾವಣೆಯ ಹಿನ್ನೆಲೆಯಲ್ಲಿ ರ‍್ಯಾಲಿ ಮುಗಿಸಿಕೊಂಡು ಕಾರು ಹತ್ತುತ್ತಿರುವಾಗ ದುಷ್ಕರ್ಮಿಗಳು ತೀರಾ ಹತ್ತಿರದಲ್ಲಿ ಬಂದು ಶೂಟೌಟ್ ಮಾಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಫರ್ನಾಂಡೊ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ವಿಲ್ಲಾವಿಸೆನ್ಸಿಯೊ ಅವರ ಪ್ರಚಾರ ಸಲಹೆಗಾರ ಪ್ಯಾಟ್ರಿಸಿಯೊ ಜುಕ್ವಿಲಾಂಡಾ ಹೇಳಿದಂತೆ, ಗುಂಡು ಹಾರಿಸುವ ಮೊದಲು ಅಭ್ಯರ್ಥಿ ಫೆರ್ನಾಂಡೊ ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದವು. ಇದರ ಹಿಂದೆ ಮಾದಕವಸ್ತು ಕಳ್ಳಸಾಗಣೆದಾರರ ಕೈವಾಡವಿದೆ. ಹಂತಕರ ವಿರುದ್ಧ ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿದರು.