ವಾಷಿಂಗ್ಟನ್ : ಅಮೆರಿಕದ ತೆರಿಗೆ ನೀತಿಯನ್ನು ಅಧ್ಯಕ್ಷ ಜೋ ಬೈಡನ್ ಕೂಲಂಕಷವಾಗಿ ಪರಿಶೀಲಿಸಿ ಅದರಲ್ಲಿ ಬದಲಾವಣೆ ಮಾಡಲಿದ್ದಾರೆ ಹಾಗೂ ಕಾರ್ಪೊರೇಟ್‌ಗಳು ಮತ್ತು ಶ್ರೀಮಂತ ಅಮೆರಿಕನ್ನರ ಮೇಲಿನ ತೆರಿಗೆಗಳನ್ನು ಗಮನಾರ್ಹವಾಗಿ ಹೆಚ್ಚಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಕ್ಟೋಬರ್‌ನಲ್ಲಿ ಪ್ರಾರಂಭವಾಗುವ 2024 ರ ಹಣಕಾಸು ವರ್ಷದಲ್ಲಿ ಫೆಡರಲ್ ವೆಚ್ಚಕ್ಕಾಗಿ ತಮ್ಮ ಮುಂಬರುವ ಬಜೆಟ್ ಕಾರ್ಯಯೋಜನೆಯ ಭಾಗವಾಗಿ ಅಧ್ಯಕ್ಷರು ಗುರುವಾರ ತೆರಿಗೆ ಹೆಚ್ಚಳ ಘೋಷಣೆ ಮಾಡುವ ನಿರೀಕ್ಷೆಯಿದೆ. ವಾಲ್ ಸ್ಟ್ರೀಟ್ ಕಂಪನಿಗಳು ಮತ್ತು ಅಮೆರಿಕದ ಕೆಲವೇ ಕೆಲ ಶ್ರೀಮಂತ ಕುಟುಂಬಗಳ ಮೇಲೆ ತೆರಿಗೆ ಹೆಚ್ಚಳದ ಪರಿಣಾಮವಾಗಬಹುದು ಎನ್ನಲಾಗಿದೆ.
ಬಿಡೆನ್ ಫೆಬ್ರವರಿಯಲ್ಲಿ ತಮ್ಮ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಕೆಲವು ಪ್ರಸ್ತಾಪಗಳ ಬಗ್ಗೆ ಉಲ್ಲೇಖಿಸಿದ್ದರು. ಬಿಲಿಯನೇರ್‌ಗಳ ಮೇಲೆ ದೊಡ್ಡ ಮಟ್ಟದ ತೆರಿಗೆ ವಿಧಿಸುವ ಮತ್ತು ಕಾರ್ಪೊರೇಟ್ ಸ್ಟಾಕ್ ಬೈಬ್ಯಾಕ್‌ಗಳ ಮೇಲಿನ ಪ್ರಸ್ತುತ ಶೇ 1 ರಷ್ಟಿರುವ ಲೆವಿಯನ್ನು ನಾಲ್ಕು ಪಟ್ಟು ಹೆಚ್ಚಿಸುವ ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. ನಾನೂ ಕೂಡ ಬಂಡವಾಳಶಾಹಿ. ಆದರೆ ನೀವು ನ್ಯಾಯಯುತವಾಗಿ ಪಾವತಿಸಬೇಕಾದ ತೆರಿಗೆಯನ್ನು ಪಾವತಿಸಿ ಎಂದು ಅವರು ಭಾಷಣದಲ್ಲಿ ಹೇಳಿದ್ದರು. ನಮ್ಮ ಪ್ರಸ್ತುತ ತೆರಿಗೆ ವ್ಯವಸ್ಥೆಯು ಬಹಳ ತಾರತಮ್ಯದಿಂದ ಕೂಡಿದೆ ಎಂಬುದನ್ನು ನೀವು ಕನಿಷ್ಠ ನಿಮ್ಮ ಮನೆಯಲ್ಲಿರುವಾಗಲಾದರೂ ಒಪ್ಪುವಿರಿ ಎಂದು ನಾನು ಭಾವಿಸುತ್ತೇನೆ ಎಂದು ಅವರು ಆಗ ಹೇಳಿದ್ದರು.
ಸದ್ಯ ಬಿಲಿಯನೇರ್ ತೆರಿಗೆ ಎಂದು ಕರೆಯಲ್ಪಡುವ ತೆರಿಗೆ ನೀತಿಯ ಪ್ರಕಾರ, 100 ಮಿಲಿಯನ್ ಡಾಲರ್ಗಳಿಗಿಂತಲೂ ಹೆಚ್ಚು ಆಸ್ತಿ ಹೊಂದಿರುವ ಅಮೆರಿಕದ ಶ್ರೀಮಂತ ಕುಟುಂಬಗಳ ಸ್ಟಾಕ್ ಮತ್ತು ಆಸ್ತಿ ಸೇರಿದಂತೆ ಆದಾಯ ಮತ್ತು ಅವಾಸ್ತವಿಕ ಬಂಡವಾಳ ಲಾಭಗಳ ಮೇಲೆ ಶೇ 20 ರಷ್ಟು ತೆರಿಗೆ ವಿಧಿಸುವ ಪ್ರಸ್ತಾವನೆಯಿದೆ. ಈಗಾಗಲೇ ಶೇ 20 ರಷ್ಟು ತೆರಿಗೆ ಪಾವತಿಸುತ್ತಿರುವ ಕುಟುಂಬಗಳು ಹೆಚ್ಚುವರಿ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ, ತೆರಿಗೆ ದರಗಳು ದರವು ಅಂತಿಮವಾಗಿ ಶೇ 25 ರಷ್ಟು ಹೆಚ್ಚಳವಾಗಬಹುದು ಎನ್ನಲಾಗಿದೆ.