ಡಮಾಸ್ಕಸ್:24 ಗಂಟೆಯಲ್ಲಿ ತ್ರಿವಳಿ ಪ್ರಬಲ ಭೂಕಂಪನದಿಂದಾಗಿ ಛಿದ್ರವಾಗಿರುವ ಸಿರಿಯಾ, ಟಿರ್ಕಿಯಲ್ಲಿ ಸಾವು ರಣಕೇಕೆ ಹಾಕಿದೆ. ಕಂಪನಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳ 5000ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಕಟ್ಟಡಗಳು ಧರಾಶಾಯಿಯಾಗಿವೆ. ಅವಶೇಷಗಳಡಿ ಜನರು ಸಿಲುಕಿದ್ದು, ಸಾವಿನ ಸಂಖ್ಯೆ 10 ಸಾವಿರ ತಲುಪುವ ಸಾಧ್ಯತೆ ಇದೆ.
ಭೂಕಂಪನದಿಂದಾಗಿ ಟರ್ಕಿಯೊಂದರಲ್ಲೇ 2370 ಜನರು ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ ಕನಿಷ್ಠ 1400 ಮಂದಿ ಸಮಾಧಿಯಾಗಿದ್ದಾರೆ. ಇಂಧನ ಪೈಪ್‌ಲೈನ್‌ಗಳು ಮತ್ತು ತೈಲ ಸಂಸ್ಕರಣಾಗಾರಗಳಲ್ಲಿ ಬೆಂಕಿ ಹೊತ್ತಿಕೊಂಡು ವ್ಯಾಪಕ ಹಾನಿ ಸಂಭವಿಸಿದೆ. ಸೋಮವಾರ ಮುಂಜಾನೆ ಉಭಯ ದೇಶಗಳ ಗಡಿ ಪ್ರದೇಶದಲ್ಲಿ 7.8 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ.
ರಕ್ಷಣಾ ಕಾರ್ಯಾಚರಣೆ ವೇಳೆ ನಡುಗಿದ ಭೂಮಿ:ಸೋಮವಾರ ಮುಂಜಾನೆ ಸಂಭವಿಸಿದ ಭೂಕಂಪನದಲ್ಲಿ ಸಿಲುಕಿದ ಜನರನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದ್ದರೆ, ಕೆಲ ಗಂಟೆಗಳ ಬಳಿಕ ಮತ್ತೆ ಧರೆ ನಡುಗಿದೆ. ರಿಕ್ಟರ್ ಮಾಪಕದಲ್ಲಿ ಅದು 7.6 ರಷ್ಟು ತೀವ್ರತೆ ದಾಖಲಾಗಿತ್ತು. ಬಳಿಕ ಮತ್ತೊಂದು ಬಾರಿ 6.5 ರಷ್ಟು ತೀವ್ರತೆಯಲ್ಲಿ ನಡುಕ ಉಂಟಾಗಿತ್ತು. 24 ಗಂಟೆಗಳ ಅವಧಿಯಲ್ಲಿ 3 ಬಾರಿ ಪ್ರಬಲವಾಗಿ ಭೂಮಿ ಕಂಪಿಸಿದರೆ, 145 ಕ್ಕೂ ಹೆಚ್ಚು ಬಾರಿ ಲಘುವಾಗಿ ಭೂಮಿ ನಡುಗಿದೆ.
ಟರ್ಕಿಯಲ್ಲಿ ಸಾವಿನ ಸಂಖ್ಯೆ 2,379 ಕ್ಕೆ ಏರಿದೆ. ಮೂರು ಪ್ರಬಲ ಭೂಕಂಪನದಲ್ಲಿ 14,483 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದರ ಬಳಿಕ 145 ಬಾರಿ ಲಘುವಾಗಿ ಭೂಮಿ ನಡುಗಿದೆ. ಸಿರಿಯಾದಲ್ಲಿ ಸರ್ಕಾರಿ ಮತ್ತು ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ 1,444 ಕ್ಕಿಂತ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಎಲ್ಲೆಲ್ಲಿ ಕಂಪಿಸಿದೆ ಭೂಮಿ:ಕಹ್ರಮನ್ಮರಸ್, ಗಾಜಿಯಾಂಟೆಪ್, ಸ್ಯಾನ್ಲಿಯುರ್ಫಾ, ದಿಯಾರ್ಬಕಿರ್, ಅದಾನ, ಅಡಿಯಾಮಾನ್, ಮಲಾತ್ಯ, ಉಸ್ಮಾನಿಯ, ಹಟೇ ಮತ್ತು ಕಿಲಿಸ್ ಸೇರಿದಂತೆ ಟರ್ಕಿಯ 10 ಪ್ರಾಂತ್ಯಗಳು, ಸಿರಿಯಾದ ಉತ್ತರ ಅಲೆಪ್ಪೊ, ಹಮಾ, ಲಟಾಕಿಯಾ ಮತ್ತು ಟಾರ್ಟಸ್ ಪೀಡಿತ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಟರ್ಕಿ, ಸಿರಿಯಾ ಮಾತ್ರವಲ್ಲದೇ, ಲೆಬನಾನ್, ಜೋರ್ಡಾನ್, ಇರಾಕ್, ಜಾರ್ಜಿಯಾ, ಸೈಪ್ರೆಸ್, ಆರ್ಮೆನಿಯಾ ದೇಶಗಳಲ್ಲೂ ಭೂಕಂಪನದ ಅನುಭವವಾಗಿದೆ.