ಅಂಕಾರಾ:ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಕೃತಿ ತಾಂಡವವಾಡಿದೆ. ಇಂದು ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಉಭಯ ರಾಷ್ಟ್ರಗಳು ತತ್ತರಿಸಿ ಹೋಗಿವೆ. 7.8 ತೀವ್ರತೆಯ ಭೂಕಂಪನದಲ್ಲಿ 640 ಕ್ಕೂ ಅಧಿಕ ಜನರು ಈವರೆಗೂ ಸಾವನ್ನಪ್ಪಿದ್ದಾರೆ. ಟರ್ಕಿಯೊಂದರಲ್ಲೇ 284 ಜನರು ಸಾವನ್ನಪ್ಪಿದ್ದಾರೆ. ಸಿರಿಯಾದಲ್ಲೂ ಇಷ್ಟೇ ಪ್ರಮಾಣದ ಜನರು ಅಸುನೀಗಿದ್ದಾರೆ.
ಪ್ರಕೃತಿಯ ಮುನಿಸಿನಿಂದಾಗಿ 2300 ಕ್ಕೂ ಹೆಚ್ಚು ಜನರು ಗಾಯಗೊಂಡರೆ, 1700 ಕ್ಕೂ ಅಧಿಕ ಕಟ್ಟಡಗಳು ನೆಲಕ್ಕುರುಳಿ ಬಿದ್ದಿವೆ. ಭೂಕಂಪದಿಂದ ಎರಡು ರಾಷ್ಟ್ರಗಳ 10 ಪ್ರಾಂತ್ಯಗಳು ತೀವ್ರ ಬಾಧಿತವಾಗಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜನರು ಅವಶೇಷಗಳಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟರ್ಕಿ, ಸಿರಿಯಾ ಮಾತ್ರವಲ್ಲದೇ, ಈಜಿಪ್ಟ್ನ ಕೈರೋದವರೆಗೂ ಭೂಕಂಪನ ಅನುಭವವಾಗಿದೆ. ಭೂಮಿ ನಡುಕದಿಂದ ದೊಡ್ಡ ದೊಡ್ಡ ಕಟ್ಟಡಗಳು ಉರುಳಿಬಿದ್ದಿವೆ. ಅದರಡಿ ಸಿಲುಕಿದ ಜನರು ಕೂಗಾಟ, ಚೀರಾಟ ಕರುಳು ಹಿಂಡುತ್ತಿದೆ. ಇನ್ನಷ್ಟು ಕಟ್ಟಡಗಳು ಅಪಾಯಕಾರಿ ಮಟ್ಟದಲ್ಲಿ ವಾಲಿಕೊಂಡಿದ್ದು, ಬೀಳುವ ಹಂತದಲ್ಲಿವೆ. ಸಿರಿಯಾದ ರಾಜಧಾನಿಯಿಂದ ಸುಮಾರು 90 ಕಿಲೋಮೀಟರ್ ದೂರವಿರುವ ಗಾಜಿಯಾಂಟೆಪ್ ನಗರದ ಉತ್ತರದಲ್ಲಿ ಭೂಕಂಪನದ ಅಲೆಗಳು ಎದ್ದಿವೆ.
ಇದು ಸುತ್ತಲಿನ 330 ಕಿಮೀ ವ್ಯಾಪ್ತಿಯಲ್ಲಿ ನಡುಕ ಉಂಟು ಮಾಡಿದೆ. ಹಲವಾರು ನಗರಗಳ ಜೊತೆಗೆ ಸಿರಿಯಾ ಯುದ್ಧದಲ್ಲಿ ವಲಸೆ ಬಂದು ನೆಲೆಸಿರುವ ನಿರಾಶ್ರಿತ ಪ್ರದೇಶದಲ್ಲೂ ಪ್ರಕೃತಿ ಮುನಿಸಿಕೊಂಡು ವೈಪರೀತ್ಯ ಸೃಷ್ಟಿಸಿದೆ. ಸಿರಿಯಾದ ಗಡಿಯಲ್ಲಿರುವ ಟರ್ಕಿ ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಸಿರಿಯನ್ ನಿರಾಶ್ರಿತರನ್ನು ಹೊಂದಿದೆ. ಹಲವು ವರ್ಷಗಳ ಕಾಲ ನಡೆದ ಯುದ್ಧದಲ್ಲಿ ನಿರಾಶ್ರಿತರಾಗಿ, ಆರೋಗ್ಯ ವ್ಯವಸ್ಥೆ ಹದಗೆಟ್ಟ ಪ್ರದೇಶದಲ್ಲಿ ಭೂಕಂಪನ ಗಾಯದ ಮೇಲೆ ಬರೆ ಎಳೆದಂತಾಗಿದೆ.
ನಿರಾಶ್ರಿತರು ನೆಲೆಸಿರುವ ಪಟ್ಟಣವೊಂದರಲ್ಲೇ ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನಷ್ಟು ಜನರು ಸಮಾಧಿಯಾಗಿರುವ ಸಾಧ್ಯತೆ ಇದೆ. ಸಾವಿನ ಸಂಖ್ಯೆ ನೂರಕ್ಕೆ ತಲುಪಲಿದೆ. ಬಂಡುಕೋರರ ಹಿಡಿತದಲ್ಲಿರುವ ವಾಯುವ್ಯ ಭಾಗದಲ್ಲಿಯೂ ತೀವ್ರ ಹಾನಿಯುಂಟಾಗಿದೆ. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು, ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶೋಧ ಮತ್ತು ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ. ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲು ಕ್ಷಿಪ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಕಟ್ಟಡಗಳು ಧರಾಶಾಯಿ:ಟರ್ಕಿ, ಸಿರಿಯಾದಲ್ಲಿ ಉಂಟಾದ ಪ್ರಬಲ ಭೂಕಂಪನದಲ್ಲಿ ನೂರಾರು ಕಟ್ಟಡಗಳು ಧರೆಗೆ ಉರುಳಿಬಿದ್ದು, ನಾಮಾವಶೇಷಗೊಂಡಿವೆ. ಟರ್ಕಿಯ ಮತಾತ್ಯ ಪ್ರಾಂತ್ಯವೊಂದರಲ್ಲೇ 130 ಕಟ್ಟಡಗಳು ನಾಶವಾಗಿದ್ದರೆ, ಉಭಯ ರಾಷ್ಟ್ರಗಳಲ್ಲಿ 1700 ಕಟ್ಟಡಗಳು ಉರುಳಿಬಿದ್ದಿವೆ. ವಾಯುವ್ಯ ಸಿರಿಯಾದ ಸಿರಿಯನ್ ಸಿವಿಲ್ ಡಿಫೆನ್ಸ್ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶ "ವಿನಾಶಕಾರಿ ಪರಿಸ್ಥಿತಿ"ಗೆ ತಲುಪಿದೆ. ಕಟ್ಟಡಗಳು ಸಂಪೂರ್ಣವಾಗಿ ಕುಸಿದು ಬಿದ್ದಿವೆ. ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ತುರ್ತು ಕೇಂದ್ರಗಳಲ್ಲಿ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಪಡೆಗಳೊಂದಿಗೆ ಜನರು ಸಹಕರಿಸಿ ಎಂದು ಅಲ್ಲಿನ ಅಧ್ಯಕ್ಷಗಳು ಕರೆ ನೀಡಿದ್ದಾರೆ.
ಭೂಕಂಪನದ ತೀವ್ರತೆ ಹೀಗಿದೆ:ಟರ್ಕಿಯ ಪ್ರಮುಖ ನಗರವಾದ ಗಾಜಿಯಾಂಟೆಪ್‌ನಿಂದ 30 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಅಲೆಗಳು ಎದ್ದಿವೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಇದು 18 ಕಿಲೋಮೀಟರ್ (11 ಮೈಲಿ) ಆಳದಲ್ಲಿ ಕಂಡುಬಂದಿದೆ. ಸುಮಾರು 10 ನಿಮಿಷಗಳ ನಂತರ 7.8 ತೀವ್ರತೆಯಲ್ಲಿ ಪ್ರಬಲವಾದ ಅಲೆಗಳು ದೊಡ್ಡ ಸದ್ದಿನೊಂದಿಗೆ ಭೂಮಿಯನ್ನು ನಡುಗಿಸಿವೆ. ಇದರಿಂದ ಅಲೆಪ್ಪೊ ಮತ್ತು ಹಮಾ, ಡಮಾಸ್ಕಸ್ ನಗರ ಸೇರಿದಂತೆ 30 ಕಿಮೀ ವ್ಯಾಪ್ತಿಯಲ್ಲಿ ಕಟ್ಟಡಗಳು ಕುಸಿದಿವೆ ಎಂದು ಸಿರಿಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.