ಟೆಲ್ ಅವೀವ್ (ಇಸ್ರೇಲ್) :ಯುದ್ಧ ಮುಗಿದ ಬಳಿಕ ಗಾಜಾ ಪಟ್ಟಿಯ ನಿಯಂತ್ರಣವನ್ನು ಪ್ಯಾಲೆಸ್ಟೈನ್ ನಿಯಂತ್ರಣ ಪ್ರಾಧಿಕಾರಕ್ಕೆ (ಪಿಎ) ಹಸ್ತಾಂತರಿಸಬೇಕೆಂಬ ಅಮೆರಿಕದ ಸಲಹೆಯನ್ನು ಇಸ್ರೇಲ್ ಸರಕಾರ ತಿರಸ್ಕರಿಸಿದೆ. ಇಸ್ರೇಲ್ ಪ್ರಧಾನಿ ಕಚೇರಿಯ ಮೂಲಗಳ ಪ್ರಕಾರ, ಯುದ್ಧದ ನಂತರ ಗಾಜಾ ಪಟ್ಟಿಯ ಆಡಳಿತವನ್ನು ಪ್ಯಾಲೆಸ್ಟೈನ್ ಅಥಾರಿಟಿ ನಿರ್ವಹಿಸುವ ಸಲಹೆಯನ್ನು ಇಸ್ರೇಲ್ ಸರ್ಕಾರ ತಿರಸ್ಕರಿಸಿದೆ.
ಪ್ಯಾಲೆಸ್ಟೈನ್ ಅಥಾರಿಟಿಗೆ ಅಧಿಕಾರ ನೀಡಿದಲ್ಲಿ ಹಮಾಸ್ ಮರುಸಂಘಟನೆಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಗಾಜಾ ಪಟ್ಟಿಯಲ್ಲಿ ಪಿಎಗೆ ವಾಸ್ತವದಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯವಾಗದಿರಬಹುದು ಎಂದು ಇಸ್ರೇಲ್ ಅಮೆರಿಕಕ್ಕೆ ತಿಳಿಸಿದೆ. ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಸದ್ಯಕ್ಕೆ ಗಾಜಾವನ್ನು ನಿಯಂತ್ರಿಸಲು ಮತ್ತು ಮುಂದಿನ ದಿನಗಳಲ್ಲಿ ಈ ಬಗೆಗಿನ ಸಾಧ್ಯಾಸಾಧ್ಯಾತೆಗಳನ್ನು ಪರಿಶೀಸಲು ಇಸ್ರೇಲ್ ಸರ್ಕಾರ ಬಯಸುತ್ತದೆ ಎಂದು ಇಸ್ರೇಲ್ ಸರ್ಕಾರದ ಮೂಲಗಳು ಹೇಳಿವೆ.
ಗಾಜಾ ಪಟ್ಟಿಯಲ್ಲಿ ಅಧಿಕಾರ ವಶಪಡಿಸಿಕೊಳ್ಳಲು ಈ ಹಿಂದೆ ಹಮಾಸ್ ಹಲವಾರು ಪ್ಯಾಲೆಸ್ಟೈನ್ ಪ್ರಾಧಿಕಾರದ ಹಿರಿಯ ನಾಯಕರನ್ನು ಗಲ್ಲಿಗೇರಿಸಿದ ಇತಿಹಾಸ ಹೊಂದಿದೆ ಎಂದು ಇಸ್ರೇಲ್ ಸರ್ಕಾರ ತಿಳಿಸಿದೆ. ಗಾಜಾ ಪಟ್ಟಿಯ ನಿಯಂತ್ರಣವನ್ನು ಪ್ಯಾಲೆಸ್ಟೈನ್ ಪ್ರಾಧಿಕಾರಕ್ಕೆ (ಪಿಎ) ಹಸ್ತಾಂತರಿಸುವುದನ್ನು ಇಸ್ರೇಲ್ ಭದ್ರತಾ ಸಂಸ್ಥೆ (ಐಎಸ್ಎ) ಕೂಡ ತೀವ್ರವಾಗಿ ವಿರೋಧಿಸಿದೆ.
ಇಸ್ರೇಲ್-ಹಮಾಸ್ ಯುದ್ಧದ ನಂತರ ಪ್ಯಾಲೆಸ್ಟೈನ್ ಪ್ರಾಧಿಕಾರವೇ ಅಂತಿಮವಾಗಿ ಗಾಜಾ ಪಟ್ಟಿ ಮತ್ತು ಪಶ್ಚಿಮ ದಂಡೆಯ ಆಡಳಿತವನ್ನು ವಹಿಸಿಕೊಳ್ಳಬೇಕು ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ನವೆಂಬರ್ 18 ರಂದು ಹೇಳಿದ್ದರು. "ದ್ವಿ-ರಾಷ್ಟ್ರ ವ್ಯವಸ್ಥೆಯತ್ತ ನಾವೆಲ್ಲ ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ, ಶಾಂತಿ ಮರುಸ್ಥಾಪಿಸುವ ನಮ್ಮ ಪ್ರಯತ್ನದ ಭಾಗವಾಗಿ ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಪ್ರದೇಶಗಳನ್ನು ಒಟ್ಟಾಗಿ ಪುನರುಜ್ಜೀವಗೊಳಿಸಿದ ಪ್ಯಾಲೆಸ್ಟೈನ್ ಅಥಾರಿಟಿಯ ಆಡಳಿತಕ್ಕೆ ವಹಿಸಬೇಕು." ಎಂದು ಬೈಡನ್ ವಾಷಿಂಗ್ಟನ್ ಪೋಸ್ಟ್ನಲ್ಲಿ ಬರೆದ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
"ಗಾಜಾದಿಂದ ಪ್ಯಾಲೆಸ್ಟೈನಿಯರನ್ನು ಬಲವಂತವಾಗಿ ಸ್ಥಳಾಂತರಿಸಬಾರದು, ಮರುಆಕ್ರಮಣ ಮಾಡಬಾರದು, ಮುತ್ತಿಗೆ ಅಥವಾ ದಿಗ್ಬಂಧನ ಇರಬಾರದು ಮತ್ತು ಭೂಪ್ರದೇಶವನ್ನು ವಶಪಡಿಸಿಕೊಳ್ಳಬಾರದು" ಎಂದು ಬೈಡನ್ ಹೇಳಿದರು. ಸಂಘರ್ಷ ಮುಗಿದ ನಂತರ ಅಮೆರಿಕ ಗಾಜಾದಲ್ಲಿ ಏನಾಗಬೇಕೆಂದು ಬಯಸುತ್ತದೆ ಎಂಬ ಪ್ರಶ್ನೆಗಳಿಗೆ ಬೈಡನ್ ಈ ಲೇಖನದಲ್ಲಿ ಉತ್ತರ ನೀಡಿದ್ದಾರೆ.
ವೆಸ್ಟ್ ಬ್ಯಾಂಕ್ನಲ್ಲಿ ನಾಗರಿಕರ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲಿಗರ ವಿರುದ್ಧ ವೀಸಾ ನಿಷೇಧ ಹೇರಲು ಅಮೆರಿಕ ಸಿದ್ಧವಿದೆ ಎಂದು ಬೈಡನ್ ಹೇಳಿದ್ದಾರೆ. ಇಸ್ರೇಲ್ ಮೇಲೆ ಅಕ್ಟೋಬರ್ 7 ರಂದು ಹಮಾಸ್ ದಾಳಿ ನಡೆಸಿದ ನಂತರ ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ನಲ್ಲಿ ವಾಸಿಸುವ ಪ್ಯಾಲೆಸ್ಟೀನಿಯರ ವಿರುದ್ಧ ಇಸ್ರೇಲಿ ವಲಸಿಗರ ಹಿಂಸಾಚಾರ ಹೆಚ್ಚಾಗಿದೆ ಎಂದು ಆರೋಪಿಸಲಾಗಿದೆ
ಇದನ್ನೂ ಓದಿ : ಪಾಕಿಸ್ತಾನಕ್ಕೆ ರಕ್ಷಣಾ ಧನಸಹಾಯ ನಿಲ್ಲಿಸಿ; ಬೈಡನ್ ಆಡಳಿತಕ್ಕೆ ಯುಎಸ್ ಸಂಸದರ ಒತ್ತಾಯ