ನವದೆಹಲಿ:ಪಾಕಿಸ್ತಾನದ ಜನಸಂಖ್ಯೆಯ ಶೇಕಡಾ 40 ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ. ತನ್ನ ಮಿಲಿಟರಿ, ರಾಜಕೀಯ ಮತ್ತು ಉದ್ಯಮ ನಾಯಕರ ಬಲವಾದ ಪಟ್ಟಭದ್ರ ಹಿತಾಸಕ್ತಿಗಳಿಂದ ಪ್ರೇರಿತವಾದ ನೀತಿ ನಿರ್ಧಾರಗಳನ್ನು ಪಾಕಿಸ್ತಾನ ಪುನರ್ ಪರಿಶೀಲನೆ ಮಾಡುವ ಸಮಯ ಇದಾಗಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.
ಬರುವ ವರ್ಷ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿದ್ದು, ಅದಕ್ಕೂ ಮುನ್ನ ಬಂದಿರುವ ವಿಶ್ವಬ್ಯಾಂಕ್ ವರದಿ ಮಹತ್ವದ್ದಾಗಿದೆ. ಈ ವರದಿಯನ್ನಾಧರಿಸಿ ಹೊಸ ಸರ್ಕಾರ ದೇಶಹಿತಕ್ಕೆ ಪೂರಕವಾದ ನೀತಿ ನಿಯಮಗಳನ್ನು ರೂಪಿಸಬಹುದು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಆರ್ಥಿಕತೆಯ ಗಾತ್ರದ ಶೇಕಡಾ 7 ಕ್ಕಿಂತ ಹೆಚ್ಚಿನ ಹಣಕಾಸಿನ ಹೊಂದಾಣಿಕೆಯ ಮೂಲಕ ಆರ್ಥಿಕ ಸ್ಥಿರತೆಯನ್ನು ಸಾಧಿಸಲು ತನ್ನ ಕೃಷಿ ಮತ್ತು ರಿಯಲ್ ಎಸ್ಟೇಟ್ ವಲಯದ ಮೇಲೆ ತೆರಿಗೆ ವಿಧಿಸುವಂತೆ ವಿಶ್ವ ಬ್ಯಾಂಕ್ ಪಾಕಿಸ್ತಾನವನ್ನು ಕೇಳಿದೆ ಎಂದು ವರದಿಗಳು ತಿಳಿಸಿವೆ.
ಕಳೆದ ಹಣಕಾಸು ವರ್ಷದ ವೇಳೆಗೆ ಪಾಕಿಸ್ತಾನದಲ್ಲಿ ಬಡತನವು ಶೇಕಡಾ 39.4 ಕ್ಕೆ ಏರಿದೆ. ಹದಗೆಟ್ಟ ಆರ್ಥಿಕ ಪರಿಸ್ಥಿತಿಗಳಿಂದಾಗಿ ಇನ್ನೂ 12.5 ಮಿಲಿಯನ್ ಜನ ಬಡತನದ ಕೂಪಕ್ಕೆ ತಳ್ಳಲ್ಪಡುವ ಸಾಧ್ಯತೆಯಿದೆ ಎಂದು ವಿಶ್ವಬ್ಯಾಂಕ್ ಶುಕ್ರವಾರ ಬಹಿರಂಗಪಡಿಸಿದೆ. ಪ್ರಸ್ತುತ ಸುಮಾರು 95 ಮಿಲಿಯನ್ ಪಾಕಿಸ್ತಾನಿಗಳು ಬಡತನದಲ್ಲಿ ಬದುಕುತ್ತಿದ್ದಾರೆ.