ಕರ್ನಾಟಕ

karnataka

By

Published : Dec 31, 2022, 6:39 PM IST

ETV Bharat / international

ಪೋಪ್ ಬೆನೆಡಿಕ್ಟ್ 16 ನಿಧನ: ಪ್ರಧಾನಿ ಮೋದಿ ಸಂತಾಪ

600 ವರ್ಷಗಳ ಇತಿಹಾಸದಲ್ಲಿ ಪೋಪ್ ಹುದ್ದೆಗೆ ರಾಜೀನಾಮೆ ನೀಡಿದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದ ಎಮೆರಿಟಸ್ ಬೆನೆಡಿಕ್ಟ್ 16 ನಿಧನರಾಗಿದ್ದಾರೆ.

pope-emeritus-benedict-xvi-passes-away
ಪೋಪ್ ಬೆನೆಡಿಕ್ಟ್ 16 ನಿಧನ: ಪ್ರಧಾನಿ ಮೋದಿ ಸಂತಾಪ

ವ್ಯಾಟಿಕನ್ ಸಿಟಿ: ನಿವೃತ್ತ ಪೋಪ್ ಎಮೆರಿಟಸ್ ಬೆನೆಡಿಕ್ಟ್ 16 ಅವರು ವಿಧಿವಶರಾಗಿದ್ದಾರೆ. 95ನೇ ವಯಸ್ಸಿನ ಅವರು ಶನಿವಾರ ಬೆಳಗ್ಗೆ 9.34ಕ್ಕೆ ನಿಧನರಾದರು ಎಂದು ವ್ಯಾಟಿಕನ್ ವಕ್ತಾರರು ತಿಳಿಸಿದ್ದಾರೆ. ಪೋಪ್ ಬೆನೆಡಿಕ್ಟ್-16 ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

1927ರ ಏಪ್ರಿಲ್ 16ರಂದು ಬವೇರಿಯಾದ ಮಾರ್ಕ್ಟಲ್ ಆಮ್ ಇನ್​ನಲ್ಲಿ ಎಮೆರಿಟಸ್ ಬೆನೆಡಿಕ್ಟ್ 16 ಜನಿಸಿದ್ದರು. ಬೆನೆಡಿಕ್ಟ್ 1951ರಲ್ಲಿ ತಮ್ಮ ಸಹೋದರ ಜಾರ್ಜ್ ಅವರೊಂದಿಗೆ ದೀಕ್ಷೆ ಪಡೆದರು. ಜರ್ಮನಿಯಲ್ಲಿ ಹಲವಾರು ವರ್ಷಗಳ ಕಾಲ ದೇವತಾಶಾಸ್ತ್ರ ಅಧ್ಯಯನದ ನಂತರ ಅವರನ್ನು 1977ರಲ್ಲಿ ಮ್ಯೂನಿಚ್‌ನ ಬಿಷಪ್ ಆಗಿ ನೇಮಿಸಲಾಗಿತ್ತು. ಇದಾದ ಮೂರು ತಿಂಗಳಲ್ಲಿ ಕಾರ್ಡಿನಲ್‌ಗೆ ಆಯ್ಕೆ ಮಾಡಲಾಗಿತ್ತು.

ಪೋಪ್ ಬೆನೆಡಿಕ್ಟ್-16 ಅವರು 2005ರ ಏಪ್ರಿಲ್ 19ರಂದು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರಾಗಿ ವ್ಯಾಟಿಕನ್ ಸಿಟಿ ರಾಜ್ಯದ ಸಾರ್ವಭೌಮರಾಗಿದ್ದರು. ಆದರೆ, 2013ರ ಫೆಬ್ರವರಿ 28ರಂದು ಅವರು ರಾಜೀನಾಮೆ ನೀಡಿದ್ದರು. ಈ ಮೂಲಕ 600 ವರ್ಷಗಳ ಇತಿಹಾಸದಲ್ಲಿ ಪೋಪ್ ಹುದ್ದೆಯನ್ನು ತ್ಯಜಿಸಿದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು.

ಪೋಪ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಬೆನೆಡಿಕ್ಟ್ 16 ಅವರು ವ್ಯಾಟಿಕನ್ ಗ್ರೌಂಡ್ಸ್ ಕಾನ್ವೆಂಟ್‌ನಲ್ಲಿ ವಾಸಿಸುತ್ತಿದ್ದರು. ಅವರ ನಂತರ ಫ್ರಾನ್ಸಿಸ್ ಪೋಪ್​ ಅಧಿಕಾರ ವಹಿಸಿಕೊಂಡಿದ್ದರು. ಪೋಪ್ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ವ್ಯಾಟಿಕನ್‌ನಲ್ಲಿ ಬೆನೆಡಿಕ್ಟ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.

ಬೆನೆಡಿಕ್ಟ್ ನಿಧನದ ಬಗ್ಗೆ ಶನಿವಾರ ಬೆಳಿಗ್ಗೆ ವ್ಯಾಟಿಕನ್ ವಕ್ತಾರ ಮ್ಯಾಟಿಯೊ ಬ್ರೂನಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಬೆನೆಡಿಕ್ಟ್ ಅವರ ಪಾರ್ಥಿವ ಶರೀರವನ್ನು ಸೋಮವಾರದಿಂದ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು ಎಂದು ಹೇಳಿದ್ದಾರೆ.

ಪೋಪ್ ಬೆನೆಡಿಕ್ಟ್ 16 ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ತಮ್ಮ ಇಡೀ ಜೀವನವನ್ನು ಚರ್ಚ್ ಮತ್ತು ಕ್ರಿಸ್ತನ ಬೋಧನೆಗಳಿಗೆ ಮುಡಿಪಾಗಿಟ್ಟ ಪೋಪ್ ಎಮೆರಿಟಸ್ ಬೆನೆಡಿಕ್ಟ್ ಅವರ ನಿಧನವು ತುಂಬಾ ದುಃಖಕರವಾಗಿದೆ. ಸಮಾಜಕ್ಕೆ ಅವರು ಸಲ್ಲಿಸಿದ ಮಹತ್ತರ ಸೇವೆಗಳಿಗಾಗಿ ಅವರನ್ನು ಸದಾ ಸ್ಮರಿಸಲಾಗುತ್ತಿದೆ. ಪ್ರಪಂಚದಾದ್ಯಂತದ ಅವರ ಲಕ್ಷಾಂತರ ಅನುಯಾಯಿಗಳಿಗೆ ನನ್ನ ಆಳವಾದ ಸಂತಾಪಗಳು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಪಿಎಂ ಮೋದಿ ತಾಯಿ ಹೀರಾಬೆನ್ ನಿಧನಕ್ಕೆ ಕಂಬನಿ ಮಿಡಿದ ಅಮೆರಿಕ ಅಧ್ಯಕ್ಷ ಬೈಡನ್​

ABOUT THE AUTHOR

...view details