ಇಸ್ಲಾಮಾಬಾದ್ (ಪಾಕಿಸ್ತಾನ): ನನ್ನನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳು ನನ್ನ ಮನೆಯನ್ನು ಸುತ್ತುವರೆದಿದ್ದಾರೆ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಬುಧವಾರ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪೊಲೀಸರು ನನ್ನ ಮನೆಗೆ ಸುತ್ತುವರೆದಿದ್ದಾರೆ. ಇದು ನನ್ನ ಬಂಧನಕ್ಕೂ ಮೊದಲು ಕೊನೆಯ ಟ್ವೀಟ್ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಬಂಧಿಸಲು ಅವರ ಮನೆಗೆ ಪಂಜಾಬ್ ಪೊಲೀಸರು ತಲುಪಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಲೈವ್ ವಿಡಿಯೋ ಒಂದರಲ್ಲಿ ಪಾಕಿಸ್ತಾನವನ್ನು ಉದ್ದೇಶಿಸಿ ಮಾತನಾಡಿರುವ ಇಮ್ರಾನ್, ಪೊಲೀಸ್ ಅಧಿಕಾರಿಗಳು ನನ್ನ ಮನೆಯನ್ನು ಸುತ್ತುವರೆದಿದ್ದಾರೆ. ಪಾಕಿಸ್ತಾನವು ವಿನಾಶದ ಹಾದಿಯಲ್ಲಿ ಸಾಗುತ್ತಿರುವುದರಿಂದ ನನಗೆ ಭಯವಾಗುತ್ತಿದೆ. ಈಗ ನಾವು ನಮ್ಮ ಬುದ್ಧಿಯನ್ನು ಬಳಸದಿದ್ದರೆ ನಮ್ಮ ದೇಶದ ಭಾಗಗಳನ್ನು ಸಂಗ್ರಹಿಸಲೂ ನಮಗೆ ಸಾಧ್ಯವಾಗದೇ ಇರಬಹುದು ಎಂದು ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ಪಾಕಿಸ್ತಾನದಲ್ಲಿ ಅರಾಜಕತೆ ತಾಂಡವಾಡುತ್ತಿದೆ. ಬಾಹ್ಯ ಶಕ್ತಿಗಳನ್ನು ಬಳಸಿಕೊಂಡು ನಾನು ದೇಶಕ್ಕೆ ಸಮರ್ಥನಾಯಕ ಅಲ್ಲ ಎಂಬ ರೀತಿಯಲ್ಲಿ ಬಿಂಬಿಸುವ ಕಾರ್ಯ ನಡೆಯುತ್ತಿದೆ. ಅಲ್ಲದೇ ಪಾಕಿಸ್ತಾನದಲ್ಲಿ ಕಾನೂನುಗಳನ್ನು ಉಲ್ಲಂಘಿಸುತ್ತಿರುವುದು, ದೇಶದಲ್ಲಿ ಚುನಾವಣೆ ಮಾಡದೇ ಇರುವುದು, ಜೊತೆಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ನ್ನು ಅವಮಾನಿಸುವುದು ಮುಂತಾದ ಕಾರ್ಯಗಳು ನಡೆಯುತ್ತಿದೆ. ಅಲ್ಲದೇ ಇಮ್ರಾನ್ ಖಾನ್ ಮತ್ತೆ ಬಾರದಂತೆ ತಡೆಯುವ ಪ್ರಯತ್ನವನ್ನು ವ್ಯಾಪಕವಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನಮ್ಮ ಸಮೀಕ್ಷೆ ಪ್ರಕಾರ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ (ಪಿಟಿಐ) ಪಕ್ಷವು ಜನಪ್ರಿಯ ಪಕ್ಷವಾಗಿ ಹೊರಹೊಮ್ಮಿದೆ. ಇದರಿಂದಾಗಿ ಇತರ ಪಕ್ಷಗಳು ಬೆದರಿದ್ದು, ಒಂದು ವೇಳೆ ಚುನಾವಣೆಗೆ ನಡೆದರೆ ಎಲ್ಲ ಪಕ್ಷಗಳು ಸೋಲುವ ಭೀತಿಯನ್ನು ಎದುರಿಸುತ್ತಿದೆ ಎಂದು ಹೇಳಿದರು. ಚುನಾವಣೆ ನಡೆದರೆ ಇಮ್ರಾನ್ ಖಾನ್ ಗೆಲ್ಲುತ್ತಾರೆ. ಇದರಿಂದ ಪಾಕಿಸ್ತಾನದ ಜನರಿಗೆ ಉಪಯೋಗ ಆಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಇವರು ಚಿಂತಿಸುವುದಿಲ್ಲ. ಇವರ ಆಡಳಿತಾವಧಿಯಲ್ಲಿ ಮುಚ್ಚಲ್ಪಟ್ಟ ಭ್ರಷ್ಟಾಚಾರ ಪ್ರಕರಣಗಳು ಹೊರಬರುತ್ತವೆ ಎಂದು ಖಾನ್ ಹೇಳಿದರು.
ಪಾಕಿಸ್ತಾನ ಮುಖವಾಣಿಯಾಗಿ ಪಾಕಿಸ್ತಾನ ಸೇನೆಯನ್ನು ನಾನು ಬೆಂಬಲಿಸಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನಷ್ಟು ಪಾಕಿಸ್ತಾನ ಸೇನೆಯನ್ನು ಬೆಂಬಲಿಸಿದ ಯಾವುದೇ ಇತರೆ ಪಾಕಿಸ್ತಾನಿಯನ್ನು ನನಗೆ ತೋರಿಸಿ ಎಂದು ಸವಾಲು ಹಾಕಿದರು. ನಾನು ಸ್ವತಂತ್ರ ವ್ಯಕ್ತಿಯಾಗಿದ್ದೇನೆ. ನಾನು ಎಂದಿಗೂ ಗುಲಾಮಗಿರಿಯನ್ನು ಒಪ್ಪುವುದಿಲ್ಲ. ಪಾಕಿಸ್ತಾನ ಡೆಮೋಕ್ರಟಿಕ್ ಮೂವ್ಮೆಂಟ್ (ಪಿಡಿಎಂ) ಉದ್ದೇಶಪೂರ್ವಕವಾಗಿ ಸೇನೆ ಮತ್ತು ಪಿಟಿಐ ನಡುವೆ ಸಂಘರ್ಷ ನಡೆಯುವಂತೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಮೇಲೆ ಯಾವುದೇ ತನಿಖೆ, ವಿಚಾರಣೆ ಇಲ್ಲದೆ ಮಿಲಿಟರಿ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ರೀತಿ ಹಿಂದೆಂದೂ ಸಂಭವಿಸಿರಲಿಲ್ಲ. ಅಲ್ಲದೆ ಪಿಟಿಐಯನ್ನು ಭಯೋತ್ಪಾದಕ ಸಂಘಟನೆ ಎಂದು ತಕ್ಷಣವೇ ನಿರ್ಧರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನನ್ನ ಬಂಧನದ ನಂತರ ಉಂಟಾದ ಗಲಭೆಗಳ ಬಗ್ಗೆ ತನಿಖೆ ನಡೆಸಲು ಆಯೋಗವನ್ನು ರಚಿಸುವಂತೆ ಕೋರಿ ತಮ್ಮ ಪಕ್ಷವು ನ್ಯಾಯಾಲಯವನ್ನು ಸಂಪರ್ಕಿಸಲಿದೆ ಎಂದು ಇಮ್ರಾನ್ ಖಾನ್ ತಿಳಿಸಿದರು.
ಇದನ್ನೂ ಓದಿ :ಅಫ್ಘಾನಿಸ್ತಾನದ ನೂತನ ಹಂಗಾಮಿ ಪ್ರಧಾನಿಯಾಗಿ ಮೌಲಾವಿ ಅಬ್ದುಲ್ ಕಬೀರ್ ನೇಮಕ