ವಾಷಿಂಗ್ಟನ್ ಡಿಸಿ (ಅಮೆರಿಕ): ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವು ಗುರುವಾರ ಮತ್ತೊಂದು ಹೊಸ ಎತ್ತರಕ್ಕೆ ತಲುಪಿವೆ. ಉಭಯ ರಾಷ್ಟ್ರಗಳ ಸಂಬಂಧವು 21ನೇ ಶತಮಾನದ ಅತ್ಯಂತ ನಿರ್ಣಾಯಕ ಸಂಬಂಧಗಳಲ್ಲಿ ಒಂದಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಎರಡು ರಾಷ್ಟ್ರಗಳ ಬಾಂಧವ್ಯಕ್ಕೆ ಅಮೆರಿಕ ನಾಯಕರ ಬದ್ಧತೆ ಸ್ಫೂರ್ತಿಯಾಗಿದ್ದು, ಭಾರತವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಪ್ರೇರಣೆಯಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸದಲ್ಲಿದ್ದಾರೆ. ಗುರುವಾರ ಬೆಳಗ್ಗೆ ಪ್ರಧಾನಿ ಮೋದಿ ನಿಯೋಗ ಮಟ್ಟದ ಮಾತುಕತೆ ನಡೆಸಲು ಶ್ವೇತಭವನದ ಓವಲ್ ಕಚೇರಿಗೆ ಭೇಟಿ ನೀಡಿದರು. ಭಾರತದ ಪ್ರಧಾನಿಗೆ ಬೈಡನ್ ದಂಪತಿ ಆತ್ಮೀಯ ಮತ್ತು ಭವ್ಯ ಸ್ವಾಗತ ನೀಡಿದರು. ಬಳಿಕ ಜೋ ಬೈಡನ್ ಹಾಗೂ ನರೇಂದ್ರ ಮೋದಿ ದ್ವೀಪಕ್ಷೀಯ ಮಾತುಕತೆ ನಡೆಸಿದರು.
ಇದನ್ನೂ ಓದಿ:Modi in US: 2024ರಲ್ಲಿ ಇಸ್ರೋ-ನಾಸಾದಿಂದ ಜಂಟಿ ಬಾಹ್ಯಾಕಾಶ ಯೋಜನೆ ಉಡ್ಡಯನ ಒಪ್ಪಂದ
ರಕ್ಷಣೆ, ಬಾಹ್ಯಾಕಾಶ, ಶುದ್ಧ ಶಕ್ತಿ ಮತ್ತು ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಭಾರತ ಹಾಗೂ ಅಮೆರಿಕ ಸಂಬಂಧಗಳನ್ನು ವೃದ್ಧಿಸುವ ಉದ್ದೇಶದಿಂದ ಪರಸ್ಪರ ಮತ್ತು ಜಾಗತಿಕ ಹಿತಾಸಕ್ತಿಗಳ ವಿಷಯಗಳ ಕುರಿತು ಉಭಯ ನಾಯಕರು ಸಮಾಲೋಚನೆ ನಡೆಸಿದರು. ಈ ವೇಳೆ, ಉಭಯ ದೇಶಗಳ ನಡುವಿನ ಸಂಬಂಧಗಳಿಗೆ ಅಮೆರಿಕ ಅಧ್ಯಕ್ಷರ ಬದ್ಧತೆಯು ಭಾರತವನ್ನು ದಿಟ್ಟ ಮತ್ತು ಧೈರ್ಯದ ಕ್ರಮಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸಿದೆ ಎಂದು ಪ್ರಧಾನಿ ಮೋದಿ ತಮ್ಮ ಆರಂಭಿಕ ಹೇಳಿಕೆಯಲ್ಲಿ ಜೋ ಬೈಡನ್ ಅವರಿಗೆ ತಿಳಿಸಿದರು.
ಇದನ್ನೂ ಓದಿ:ಭಾರತದ ನುರಿತ ಉದ್ಯೋಗಿಗಳಿಗಾಗಿ ಸರಳ ವೀಸಾ ಯೋಜನೆ ರೂಪಿಸಲು ಮುಂದಾದ ಅಮೆರಿಕ; ಮೋದಿ ಪ್ರವಾಸದ ಇಂಪ್ಯಾಕ್ಟ್!