ವಾಷಿಂಗ್ಟನ್ ಡಿಸಿ(ಅಮೆರಿಕ): ಆಫ್ರಿಕನ್-ಅಮೆರಿಕನ್ ನಟಿ ಮತ್ತು ಗಾಯಕಿ ಮೇರಿ ಮಿಲ್ಬೆನ್ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಮೋದಿ ಅವರು ಮಹಿಳೆಯರ ಪರವಾಗಿ ನಿಲ್ಲುತ್ತಾರೆ. ಅವರು ಭಾರತ ಮತ್ತು ಅಲ್ಲಿನ ನಾಗರಿಕರ ಪ್ರಗತಿಗೆ ಅತ್ಯುತ್ತಮ ನಾಯಕ ಎಂದು ಬಣ್ಣಿಸಿದರು.
ಬಿಹಾರದ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರ ಪಾತ್ರದ ಕುರಿತು ಮಾತನಾಡುವಾಗ ಸಿಎಂ ನಿತೀಶ್ ಕುಮಾರ್, ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ನಿತೀಶ್ ಹೇಳಿಕೆ ಖಂಡಿಸಿದ ಮಿಲ್ಬೆನ್: ಸಿಎಂ ನಿತೀಶ್ ಕುಮಾರ್ ಹೇಳಿಕೆಯನ್ನು ನಟಿ, ಗಾಯಕಿ ಮೇರಿ ಮಿಲ್ಬೆನ್ ಖಂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 2024ರ ಚುನಾವಣೆ ಜಗತ್ತಿನಾದ್ಯಂತ ಪ್ರಾರಂಭವಾಗಿದೆ. ಭಾರತ, ಅಮೆರಿಕ ಸೇರಿದಂತೆ ಹಲವೆಡೆ ಚುನಾವಣೆ ನಡೆಯಲಿದೆ. ಚುನಾವಣೆಗಳು ಬದಲಾವಣೆಗಳಿಗೆ ಅವಕಾಶ ಒದಗಿಸುತ್ತವೆ. ಇದನ್ನು ನಾವು ಹಳೆಯ ನಿಯಮಗಳನ್ನು ಬದಲಾಯಿಸಲು, ಪ್ರಗತಿಪರರಲ್ಲದ ಜನರಿಗೆ ಅಂತ್ಯ ಹಾಡಲು ಬಳಸಬೇಕು. ಈ ಮೂಲಕ ನಮ್ಮ ನಾಗರಿಕ ನಂಬಿಕೆಗಳಿಗೆ ಸ್ಫೂರ್ತಿ ನೀಡುವ, ದೇಶದ ಭವಿಷ್ಯವನ್ನು ಉಜ್ವಲಗೊಳಿಸುವವರನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.
ಸಾಕಷ್ಟು ಜನರು ನೀವೇಕೆ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತೀರಾ ಮತ್ತು ಭಾರತದ ಆಗು ಹೋಗುಗಳನ್ನು ಅಷ್ಟೊಂದು ನಿಕಟವಾಗಿ ಅನುಸರಿಸುತ್ತೀರಾ ಎಂದು ಕೇಳುತ್ತಾರೆ. ಅದಕ್ಕೆ ನನ್ನ ಉತ್ತರ, ನಾನು ಭಾರತವನ್ನು ಪ್ರೀತಿಸುತ್ತೇನೆ. ನರೇಂದ್ರ ಮೋದಿ ಅವರು ಭಾರತ ಮತ್ತು ಇಲ್ಲಿನ ನಾಗರಿಕರ ಪ್ರಗತಿಗೆ ಅತ್ಯುತ್ತಮ ನಾಯಕ ಎಂದು ನಾನು ನಂಬುತ್ತೇನೆ. ಅವರು ಮಹಿಳೆಯರ ಪರವಾಗಿ ನಿಲ್ಲುತ್ತಾರೆ. ಅಲ್ಲದೆ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೂ ಅವರು ಉತ್ತಮ ನಾಯಕರಾಗಿದ್ದಾರೆ ಎಂದು ಹೇಳಿದರು.
ಭಾರತೀಯ ಪ್ರಜೆಯಾಗಿದ್ದರೆ ಬಿಹಾರದಿಂದ ಸ್ಪರ್ಧಿಸುತ್ತಿದ್ದೆ: ಇದರ ಜೊತೆಗೆ, ಮಿಲ್ಬೆನ್ ಬಿಹಾರದ ಧೈರ್ಯವಂತ ಮಹಿಳೆಯರು ಸಿಎಂ ನಿತೀಶ್ ಕುಮಾರ್ ವಿರುದ್ಧ ಉಮೇದುವಾರಿಕೆ ಸಲ್ಲಿಸುವಂತೆಯೂ ಕರೆ ಕೊಟ್ಟರು. ಬಿಹಾರವನ್ನು ಮುನ್ನಡೆಸಲು ಮಹಿಳೆಗೆ ಅಧಿಕಾರ ನೀಡುವಂತೆ ಬಿಜೆಪಿಯಲ್ಲಿ ಮನವಿ ಮಾಡಿದರು. ಇದೇ ವೇಳೆ ನಾನು ಭಾರತೀಯ ಪ್ರಜೆಯಾಗಿದ್ದರೆ ಬಿಹಾರಕ್ಕೆ ಬಂದು ಸಿಎಂ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೆ. ಬಿಜೆಪಿ ಮಹಿಳೆಗೆ ಅಧಿಕಾರ ನೀಡಬೇಕು. ಈ ಮೂಲಕ ಮಹಿಳಾ ಸಬಲೀಕರಣ ಮಾಡಬೇಕೆಂದು ಒತ್ತಾಯಿಸಿದರು.
ನಿತೀಶ್ ಕುಮಾರ್ ವಿರುದ್ಧ ಮೋದಿ ವಾಗ್ದಾಳಿ: ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಿಎಂ ನಿತೀಶ್ ಕುಮಾರ್ ವಿರುದ್ಧ ಮಧ್ಯಪ್ರದೇಶದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು. ಈಗಾಗಲೇ ನಿತೀಶ್ ತಮ್ಮ ಹೇಳಿಕೆ ಸಂಬಂಧ ಕ್ಷಮೆ ಯಾಚಿಸಿದ್ದು, ಹೇಳಿಕೆಯನ್ನು ಹಿಂಪಡೆಯುವುದಾಗಿ ಹೇಳಿದ್ದರು. ನನ್ನ ಮಾತುಗಳು ತಪ್ಪಾಗಿದ್ದರೆ, ಅದಕ್ಕೆ ಕ್ಷಮೆ ಯಾಚಿಸುತ್ತೇನೆ. ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನನ್ನ ಮಾತುಗಳನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದರು. ರಾಷ್ಟ್ರೀಯ ಮಹಿಳಾ ಆಯೋಗವು ಹೇಳಿಕೆಯನ್ನು ಖಂಡಿಸಿದ್ದು, ಈ ಕೂಡಲೇ ಬೇಷರತ್ ಕ್ಷಮೆ ಯಾಚಿಸಬೇಕೆಂದು ಹೇಳಿತ್ತು.
ಇದನ್ನೂ ಓದಿ:ಮಹಿಳೆಯರ ಕುರಿತು ಹೇಳಿಕೆ: ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಮುಜಫರ್‌ಪುರದ ಸಿಜೆಎಂ ನ್ಯಾಯಾಲಯದಲ್ಲಿ ದೂರು