ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಈ ಸಮಯದಲ್ಲಿ ಉಭಯ ದೇಶಗಳ ನಡುವೆ ಪರಸ್ಪರ ಲಾಭದಾಯಕ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಶೀಘ್ರ ತೀರ್ಮಾನದ ಅಗತ್ಯದ ಕುರಿತು ಚರ್ಚಿಸಿದರು. ಜತೆಗೆ ಭಾರತ - ಯುಕೆ ಮಾರ್ಗಸೂಚಿ 2030ರ ಭಾಗವಾಗಿ ಹಲವಾರು ದ್ವಿಪಕ್ಷೀಯ ವಿಷಯಗಳ ಪ್ರಗತಿಯನ್ನು ಇಬ್ಬರೂ ಪರಿಶೀಲಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಉಭಯ ನಾಯಕರು ವಿಶೇಷವಾಗಿ ವ್ಯಾಪಾರ ಮತ್ತು ಆರ್ಥಿಕ ವಲಯಗಳಲ್ಲಿ ಬೆಳೆಯುತ್ತಿರುವ ಸಹಕಾರದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಇಂಗ್ಲೆಂಡ್ನಲ್ಲಿರುವ ಭಾರತೀಯ ರಾಜತಾಂತ್ರಿಕ ಸಂಸ್ಥೆಗಳ ಭದ್ರತೆಯ ವಿಷಯವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ ಭಾರತ ವಿರೋಧಿ ಕ್ರಮಗಳ ವಿರುದ್ಧ ಕಠಿಣ ಕ್ರಮಕ್ಕೆ ಕರೆ ನೀಡಿದರು. ಭಾರತೀಯ ಹೈಕಮಿಷನ್ ಮೇಲಿನ ದಾಳಿಯನ್ನು ಯುಕೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸುತ್ತದೆ ಮತ್ತು ಭಾರತೀಯ ಮಿಷನ್ ಮತ್ತು ಅದರ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಗಮನ ಹರಿಸಲಾಗುವುದು ಎಂದು ರಿಷಿ ಸುನಕ್ ಭರವಸೆ ನೀಡಿದರು.
ಆರ್ಥಿಕ ಅಪರಾಧಿಗಳ ವಿಷಯ ಪ್ರಸ್ತಾಪ:ಬ್ರಿಟನ್‌ನಲ್ಲಿ ಆಶ್ರಯ ಪಡೆದಿರುವ ಆರ್ಥಿಕ ಅಪರಾಧಿಗಳ ವಿಷಯವನ್ನೂ ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಅವರು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮುಂದೆ ಹಾಜರಾಗಲು ಪರಾರಿಯಾದವರ ವಾಪಸಾತಿಗೆ ಪ್ರಧಾನಿ ಮೋದಿ ಆಗ್ರಹಿಸಿದರು ಎಂದು ಪಿಎಂಒ ಪ್ರಕಟಣೆ ತಿಳಿಸಿದೆ. 2023ರ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಪಿಎಂ ಸುನಕ್ ಅವರನ್ನು ಪಿಎಂ ಮೋದಿ ಆಹ್ವಾನಿಸಿದರು. ಪ್ರಧಾನಿ ಸುನಕ್ ಭಾರತ ಜಿ20 ಅಧ್ಯಕ್ಷತೆ ವಹಿಸಿ ಮಾಡಿದ ಪ್ರಗತಿಯನ್ನು ಶ್ಲಾಘಿಸಿದರು ಮತ್ತು ಭಾರತದ ಉಪಕ್ರಮಗಳು ಮತ್ತು ಅವುಗಳ ಯಶಸ್ಸಿಗೆ ಯುಕೆ ಸಂಪೂರ್ಣ ಬೆಂಬಲವನ್ನು ಅವರು ಪುನರುಚ್ಚರಿಸಿದರು.
ಬೈಸಾಖಿ(ಉತ್ತರ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ)ಯ ಮುನ್ನ ದಿನದಂದು ಸುನಕ್ ಮತ್ತು ಇಂಗ್ಲೆಂಡ್ ನಲ್ಲಿರುವ ಭಾರತೀಯ ಸಮುದಾಯಕ್ಕೆ ಪ್ರಧಾನಿ ಮೋದಿ ಶುಭಾಶಯ ತಿಳಿಸಿದರು. "ಪಿಎಂ ರಿಷಿ ಸುನಕ್ ಅವರೊಂದಿಗೆ ಮಾತನಾಡಲು ಸಂತೋಷವಾಗಿದೆ. ಅವರಿಗೆ ಬೈಸಾಖಿ ಶುಭಾಶಯಗಳನ್ನು ಮತ್ತು ಯುಕೆಯಲ್ಲಿರುವ ಭಾರತೀಯ ಸಮುದಾಯಕ್ಕೆ ಶುಭಾಶಯಗಳು" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.