ಪೋರ್ಟ್ ಮೊರೆಸ್ಬಿ: ನೈಋತ್ಯ ಪೆಸಿಫಿಕ್ ರಾಷ್ಟ್ರದ ಜನರಿಗೆ ಭಾರತೀಯ ಚಿಂತನೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಟೋಕ್ ಪಿಸಿನ್ ಭಾಷೆಯಲ್ಲಿ ತಮಿಳು ಕ್ಲಾಸಿಕ್ 'ತಿರುಕ್ಕುರಲ್' ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಬಿಡುಗಡೆ ಮಾಡಿದರು. ಪುಸ್ತಕ ಬಿಡುಗಡೆ ವೇಳೆ ಮೋದಿಗೆ ಪಪುವಾ ನ್ಯೂಗಿನಿ ಪ್ರಧಾನ ಮಂತ್ರಿ ಜೇಮ್ಸ್ ಮರಾಪೆ ಸಾಥ್ ನೀಡಿದರು.
ಪ್ರಥಮ ಬಾರಿಗೆ ಭಾನುವಾರ ಪಪುವಾ ನ್ಯೂಗಿನಿಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸುವ ಸಲುವಾಗಿ ಮೋದಿ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. ಪಿಎನ್ಜಿ ಪ್ರಧಾನ ಮಂತ್ರಿ ಜೇಮ್ಸ್ ಮರಾಪೆ ನೇತ್ವದಲ್ಲಿ ಇಂದು ನಡೆದ ಭಾರತ ಮತ್ತು 14 ಪೆಸಿಫಿಕ್ ದ್ವೀಪ ರಾಷ್ಟ್ರಗಳ ನಡುವಿನ ಪ್ರಮುಖ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸಹ - ಅಧ್ಯಕ್ಷತೆ ವಹಿಸಿದರು.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದ್ದು, "ಟೋಕ್ ಪಿಸಿನ್ ಪಪುವಾ ನ್ಯೂಗಿನಿಯಾದ ಅಧಿಕೃತ ಭಾಷೆ. ತಮಿಳು ಕ್ಲಾಸಿಕ್ ಅನ್ನು ಪಶ್ಚಿಮ ನ್ಯೂ ಬ್ರಿಟನ್ ಪ್ರಾಂತ್ಯದ ಗವರ್ನರ್ ಸಸಿಂದ್ರನ್ ಮುತ್ತುವೆಲ್ ಮತ್ತು ಸುಭಾ ಸಸಿಂದ್ರನ್ ಅನುವಾದಿಸಿದ್ದಾರೆ. ಈ ಪುಸ್ತವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಪಿಎಂ ಜೇಮ್ಸ್ ಮರಾಪೆ ನ್ಯೂಗಿನಿಯಾದ ಟೋಕ್ ಪಿಸಿನ್ ಭಾಷೆಯಲ್ಲಿ ಇಂದು ಈ ಪುಸ್ತಕ ಬಿಡುಗಡೆ ಮಾಡಿದ್ದು, ಇದು ಭಾರತೀಯ ಚಿಂತನೆ ಮತ್ತು ಸಂಸ್ಕೃತಿಯನ್ನು ಪಪುವಾ ನ್ಯೂಗಿನಿಯಾದ ಜನರಿಗೆ ತಿಳಿಸಿಕೊಡಲಿದೆ. ಹಾಗೆಯೇ, ಭಾರತೀಯ ವಲಸಿಗರು ತಾಯ್ನಾಡಿನೊಂದಿಗೆ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ" ಎಂದು ತಿಳಿಸಿದೆ.