ನವದೆಹಲಿ:ವಿಶ್ವದ ಪ್ರಭಾವಿ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದೇಶಗಳ ಪ್ರವಾಸದಲ್ಲಿದ್ದು, ಈ ವೇಳೆ ಅವರು ಅಪರೂಪದ ಗೌರವಕ್ಕೆ ಪಾತ್ರರಾಗುವ ನಿರೀಕ್ಷೆ ಇದೆ. ಪ್ರಸ್ತುತ ಜಪಾನ್ ದೇಶದಿಂದ ಪಪುವಾ ನ್ಯೂಗಿನಿಗೆ ಅವರು ಪ್ರಯಾಣ ಬೆಳೆಸಿದ್ದಾರೆ. ಆ ಬಳಿಕ ಆಸ್ಟ್ರೇಲಿಯಾಕ್ಕೆ ತೆರಳುವರು.
ಸತತ 2ನೇ ಸಲ ಜಿ7 ಶೃಂಗದಲ್ಲಿ ಭಾಗಿ:ಪ್ರಧಾನಿ ಮೋದಿ ಅವರು ಜಪಾನ್‌ನ ಹಿರೋಶಿಮಾದಲ್ಲಿ ನಡೆಯುತ್ತಿರುವ ಗ್ರೂಪ್ ಆಫ್ ಸೆವೆನ್/ ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷ ಅಂದರೆ, ಭಾರತವು ಜಿ7 ಶೃಂಗಸಭೆಗೆ ಸತತ ಎರಡನೇ ಬಾರಿಗೆ ಆಹ್ವಾನ ಪಡೆದುಕೊಂಡಿದೆ. ಈ ವಿಶೇಷ ಗೌರವ ಸಿಕ್ಕಿದ್ದು ಇದೇ ಮೊದಲು. ಅಮೆರಿಕ, ಜಪಾನ್ ಸೇರಿದಂತೆ ವಿವಿಧ ರಾಷ್ಟ್ರಗಳು ಜಿ7 ಶೃಂಗ ರಚಿಸಿಕೊಂಡಿದ್ದು, ಭಾರತವೂ ಅದರಲ್ಲಿ ಭಾಗಿಯಾಗಿ, ದ್ವಿಪಕ್ಷೀಯ ಸಭೆಗಳನ್ನು ನಡೆಸಿದೆ.
ಮೋದಿಗೆ ಪಪುವಾ ವಿಶೇಷ ಸ್ವಾಗತ:ಪಪುವಾ ನ್ಯೂಗಿನಿಗೆ ಮೋದಿ ಅವರ ಮೊದಲ ಪ್ರವಾಸ ಇದಾಗಿದೆ. ಜೊತೆಗೆ, ಇಂಡೋ ಪೆಸಿಫಿಕ್ ದೇಶಕ್ಕೂ ಕೂಡಾ ಯಾವುದೇ ಭಾರತೀಯ ಪ್ರಧಾನಿಯ ಮೊದಲ ಭೇಟಿಯೂ ಹೌದು. ಮೋದಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಆ ದೇಶ ಸಜ್ಜಾಗಿದೆ.
ಸಾಮಾನ್ಯವಾಗಿ, ಪಪುವಾ ನ್ಯೂಗಿನಿಯಲ್ಲಿ ಸೂರ್ಯಾಸ್ತದ ನಂತರ ಬರುವ ಯಾವುದೇ ನಾಯಕರಿಗೆ ವಿಧ್ಯುಕ್ತ ಸ್ವಾಗತ ನೀಡುವುದಿಲ್ಲ. ಆದರೆ, ಮೋದಿ ಅವರಿಗೆ ವಿಶೇಷ ವಿನಾಯಿತಿ ನೀಡಲು ದೇಶ ನಿರ್ಧರಿಸಿದೆ. ಪೂರ್ಣ ಪ್ರಮಾಣದಲ್ಲಿ ವಿಧ್ಯುಕ್ತ ಸ್ವಾಗತವನ್ನು ಕೋರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಪಪುವಾ ನ್ಯೂಗಿನಿ ಭೇಟಿಯ ವೇಳೆ, ಮೋದಿ ಅವರು ಭಾರತ- ಪೆಸಿಫಿಕ್ ದ್ವೀಪಗಳ ಸಹಕಾರದ ವೇದಿಕೆಯ (ಎಫ್‌ಪಿಐಸಿ III ಶೃಂಗಸಭೆ) 3 ನೇ ಶೃಂಗಸಭೆಯ ಸಹ ಅಧ್ಯಕ್ಷತೆ ವಹಿಸಲಿದ್ದಾರೆ. ಪಪುವಾ ನ್ಯೂಗಿನಿ ಅಧ್ಯಕ್ಷ ಜೇಮ್ಸ್ ಮರಾಪೆ ಅವರು ಅಧ್ಯಕ್ಷರಾಗಿರಲಿದ್ದಾರೆ.