ನವದೆಹಲಿ:ಪರಿಸರ ರಕ್ಷಣೆ ಕುರಿತು ದುಬೈನಲ್ಲಿ ನಡೆದ ಕಾಪ್-28 (COP28) ಸಮ್ಮೇಳನದಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಮರಳಿದ್ದಾರೆ. ಸಮಾವೇಶದಲ್ಲಿ ವಿಶ್ವದ ಹಲವು ನಾಯಕರ ಜೊತೆ ಚರ್ಚೆ ನಡೆಸಿದರು. ಇದೇ ವೇಳೆ, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಜೊತೆ ಮೋದಿ ಸೆಲ್ಫಿ ಇಳಿದಿದ್ದು, ಅದನ್ನು ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮೊದಲು ಇಟಲಿ ಪಿಎಂ ಮೋದಿ ಅವರೊಂದಿಗಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು, 'ಕಾಪ್-28 ಸಮ್ಮೇಳನದಲ್ಲಿ ಒಳ್ಳೆಯ ಗೆಳೆಯರು' ಎಂದು ಒಕ್ಕಣೆ ಬರೆದುಕೊಂಡಿದ್ದರು. COP-28 ರ ವೇಳೆ ಉಭಯ ನಾಯಕರ ನಡುವೆ ನಡೆದ ಸಭೆಯಲ್ಲಿ ಇಟಲಿ ಮತ್ತು ಭಾರತ ಪರಿಸರ ರಕ್ಷಣೆ ಸುಸ್ಥಿರ ಮತ್ತು ಸಮೃದ್ಧ ಭವಿಷ್ಯದ ಬಗ್ಗೆ ಉಲ್ಲೇಖಿಸಿದರು.
ಪ್ರಧಾನಿ ಮೋದಿ ಅವರು ಶನಿವಾರ ಮೆಲಾನಿ ಅವರ ಪೋಸ್ಟ್ ಅನ್ನು ಮರು ಹಂಚಿಕೊಂಡಿದ್ದಾರೆ. ಜೊತೆಗೆ ಸೆಲ್ಫಿ ಫೋಟೋಗೆ ಪ್ರತಿಕ್ರಿಯಿಸಿದ್ದು, 'ಸ್ನೇಹಿತರನ್ನು ಭೇಟಿಯಾಗಲು ಯಾವಾಗಲೂ ಸಂತೋಷವಾಗುತ್ತದೆ' ಬರೆದಿದ್ದಾರೆ. ಅಲ್ಲದೇ, COP-28 ಶೃಂಗಸಭೆಯಲ್ಲಿ ಇಟಲಿಯ ಪ್ರಧಾನಿ ಜಾರ್ಜಿಯ ಮೆಲೋನಿ ಅವರನ್ನು ಭೇಟಿ ಮಾಡಿ ಸುಸ್ಥಿರ ಮತ್ತು ಸಮೃದ್ಧ ಪರಿಸರಕ್ಕಾಗಿ ಉಭಯ ದೇಶಗಳ ನಡುವೆ ಸಹಯೋಗದ ಪ್ರಯತ್ನಗಳನ್ನು ಎದುರು ನೋಡುತ್ತಿದ್ದೇನೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಮೆಲೋಡಿ' ಹ್ಯಾಷ್ಟ್ಯಾಗ್ ಟ್ರೆಂಡ್:ಇಬ್ಬರೂ ತಮ್ಮ ಸೆಲ್ಫಿ ಚಿತ್ರಗಳನ್ನು ಹಂಚಿಕೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಹೆಸರಿನ ಸಂಯೋಜಿತ 'ಮೆಲೋಡಿ' ಹ್ಯಾಷ್ಟ್ಯಾಗ್ ಟ್ರೆಂಡ್ ಸೃಷ್ಟಿಸಿದೆ. ಅದರಲ್ಲಿ ಈ ಹಿಂದಿನ ಭೇಟಿಯ ವೇಳೆಯ ಫೋಟೋಗಳನ್ನೂ ಹಂಚಿಕೊಳ್ಳಲಾಗಿದೆ. ಈ ಹಿಂದೆಯೂ ಇದೇ ರೀತಿಯ ಮೆಲೋಡಿ ಹೆಸರು ಟ್ರೆಂಡ್ ಆಗಿತ್ತು.