ಮ್ಯೂನಿಚ್:ಜರ್ಮನಿಯಲ್ಲಿ ಇಂದಿನಿಂದ ಆರಂಭವಾಗಿರುವ ಜಿ7 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ವಿವಿಧ ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಿರುವ ಮೋದಿ ಮಾತುಕತೆ ನಡೆಸಿದರು.
ಶೃಂಗಸಭೆಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಸ್ವಾಗತಿಸಿದರು. ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಜಿ7 ರಾಷ್ಟ್ರಗಳ ನಾಯಕರ ಜೊತೆ ಕೈ ಕುಲುಕಿ ಕುಶಲೋಪರಿ ಹಂಚಿಕೊಂಡರು. ಬಳಿಕ ನಡೆದ ಸಭೆಯಲ್ಲಿ ಅವರು ಪಾಲ್ಗೊಂಡರು.
ಎರಡು ದಿನ ನಡೆಯುವ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಪರಿಸರ, ಇಂಧನ, ಹವಾಮಾನ, ಆಹಾರ ಭದ್ರತೆ, ಆರೋಗ್ಯ, ಲಿಂಗ ಸಮಾನತೆ ಮತ್ತು ಪ್ರಜಾಪ್ರಭುತ್ವ ರಕ್ಷಣೆ ಕುರಿತು ನಡೆಯುವ ಸಭೆಯಲ್ಲಿ ಮಾತನಾಡಲಿದ್ದಾರೆ.