ವಾಷಿಂಗ್ಟನ್ (ಅಮೆರಿಕ) : ಯುಎನ್ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳನ್ನು ಸುಧಾರಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಒತ್ತಾಯಿಸಿದರು. ಅಮೆರಿಕ ಜೊತೆಗಿನ ಭಾರತದ ಬಾಂಧವ್ಯದ ಕುರಿತು ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ, "ಉಭಯ ದೇಶಗಳು ಉತ್ತಮ ಸಂಬಂಧ ಹೊಂದಿದ್ದು, ಕೇವಲ ದೇಶದ ಹಣೆಬರಹವನ್ನು ಮಾತ್ರ ರೂಪಿಸದೇ ಪ್ರಪಂಚದ ಭವಿಷ್ಯವನ್ನು ಸಹ ರೂಪಿಸುತ್ತವೆ" ಎಂದು ಭರವಸೆ ವ್ಯಕ್ತಪಡಿಸಿದರು.
ಎರಡನೇ ಬಾರಿಗೆ ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೋದಿ, ಇಂಡೋ ಪೆಸಿಫಿಕ್ ಗಡಿ ಸಮಸ್ಯೆ ಕುರಿತು ಚೀನಾದ ವಿರುದ್ಧ ವಾಗ್ದಾಳಿ ನಡೆಸಿದರು. "ನಾವು ಉಚಿತ, ಮುಕ್ತ ಮತ್ತು ಅಂತರ್ಗತ ಇಂಡೋ ಪೆಸಿಫಿಕ್‌ನ ದೃಷ್ಟಿಕೋನವನ್ನು ಹೊಂದಿದ್ದು, ಸುರಕ್ಷಿತ ಸಮುದ್ರಗಳಿಂದ ಸಂಪರ್ಕ ಹೊಂದಿದ್ದೇವೆ. ಈ ಪ್ರದೇಶದ ಶಾಂತಿ, ಸ್ಥಿರತೆ ಕಾಪಾಡುವುದು ನಮ್ಮ ಕರ್ತವ್ಯ. ಅಂತಾರಾಷ್ಟ್ರೀಯ ಕಾನೂನಿನ ಆಧಾರದ ಮೇಲೆ ಕೆಲಸ ಮಾಡಲು ಪಾಲುದಾರರಾಗಿ ಭಾರತ ಮತ್ತು ಅಮೆರಿಕ ಮುಂಚೂಣಿಯಲ್ಲಿರುತ್ತವೆ" ಎಂದು ಅವರು ಹೇಳಿದರು.
ಭಯೋತ್ಪಾದನೆ ವಿಷಯವನ್ನೂ ಪ್ರಸ್ತಾಪಿಸಿದ ಪ್ರಧಾನಿಯವರು, "ಉಗ್ರವಾದ ಮನುಕುಲದ ಶತ್ರು, ಅದಕ್ಕೆ ಯಾವುದೇ ಸಮರ್ಥನೆಗಳಾಗಲಿ ಅಥವಾ ಕ್ಷಮೆಯಾಗಲಿ ಇಲ್ಲ. ಭಯೋತ್ಪಾದನೆಯು ಜಗತ್ತಿನ್ನು ಕಾಡುತ್ತಿದೆ. ಈ ವಿಚಾರದಲ್ಲಿ ಯಾವುದೇ ಸಮರ್ಥನೆ, ಕ್ಷಮೆಗಳಿಗೆ ಅವಕಾಶವಿಲ್ಲ. ನಾವು ಭಯೋತ್ಪಾದನೆಯನ್ನ ಬೆಂಬಲಿಸುತ್ತಿರುವ ಮತ್ತು ಅದಕ್ಕೆ ಉತ್ತೇಜನ ನೀಡುತ್ತಿರುವ ಶಕ್ತಿಗಳನ್ನು ಮೆಟ್ಟಿ ನಿಲ್ಲಬೇಕಿದೆ" ಎಂದು ಹೇಳಿದರು.
ಇದನ್ನೂ ಓದಿ :ಭಾರತ- ಅಮೆರಿಕ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿವೆ: ಪ್ರಧಾನಿ ನರೇಂದ್ರ ಮೋದಿ