ಹಿರೋಶಿಮಾ(ಜಪಾನ್):ಜಪಾನ್ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾಗಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂದುವರೆದ 7 ರಾಷ್ಟ್ರಗಳ ನಾಯಕರ ಜೊತೆ ಮಾತುಕತೆ ನಡೆಸಿದರು. ಸಭೆಯ ವೇಳೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು, ಮೋದಿ ಇರುವ ಜಾಗಕ್ಕೇ ಬಂದು ಆಲಂಗಿಸಿಕೊಂಡರು. ಕೆಲ ಕಾಲ ಆಪ್ತ ಮಾತುಕತೆ ಬಳಿಕ ಅಲ್ಲಿಂದ ತೆರಳಿದರು. ಇದರ ವಿಡಿಯೋ ವೈರಲ್ ಆಗಿದೆ.
ಜಪಾನ್ನಲ್ಲಿ ನಡೆಯುತ್ತಿರುವ ಶೃಂಗದಲ್ಲಿ ಭಾರತ, ಅಮೆರಿಕ, ಉಕ್ರೇನ್ ಸೇರಿದಂತೆ 7 ರಾಷ್ಟ್ರಗಳ ನಾಯಕರೂ ಆಗಮಿಸಿದ್ದಾರೆ. ಜಿ 7ಶೃಂಗಸಭೆಯ 6ನೇ ವರ್ಕಿಂಗ್ ಸೆಷನ್ಸ್ ನಡೆಯುತ್ತಿದ್ದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಕುಳಿತಿದ್ದ ಜಾಗಕ್ಕೆ ತಾವೇ ಬಂದರು. ಇದನ್ನು ಗಮನಿಸಿದ ಮೋದಿ ಅವರು ತಕ್ಷಣವೇ ಎದ್ದು ನಿಂತು ಅವರನ್ನು ಆಲಂಗಿಸಿಕೊಂಡರು.
ಇಬ್ಬರೂ ನಾಯಕರು ಕೈಕುಲುಕಿದ ಬಳಿಕ ಉಭಯ ಕುಶಲೋಪರಿ ವಿಚಾರಿಸಿದರು. ಇದಾದ ಬಳಿಕ ತುಸು ಹೊತ್ತು ಮಾತನಾಡಿ ಅಲ್ಲಿಂದ ಬೈಡನ್ ತೆರಳಿದರು. ಇಬ್ಬರ ಆಪ್ತ ಸಮಾಲೋಚನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆಯೂ ಪ್ರಧಾನಿ ಮೋದಿ ಅವರನ್ನು ಹುಡುಕಿಕೊಂಡು ಬಂದ ಘಟನೆ ನಡೆದಿತ್ತು. ವಿಶ್ವದ ಪ್ರಭಾವಿ ನಾಯಕರಾದ ಮೋದಿ ಅವರನ್ನು ಅಮೆರಿಕವೇ ಹುಡುಕಿಕೊಂಡು ಬಂದಿದೆ ಎಂದು ಬಣ್ಣಿಸಲಾಗಿತ್ತು. ಇದೀಗ ಜಪಾನ್ನಲ್ಲಿ ಅದು ಮರುಕಳಿಸಿದೆ.
ಜಿ7 ಶೃಂಗಸಭೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೇ 19ರಂದು ಜಪಾನ್ನ ಹಿರೋಶಿಮಾವನ್ನು ತಲುಪಿದರು. ಪ್ರಧಾನಿ ಅವರನ್ನು ಅನಿವಾಸಿ ಭಾರತೀಯರು ಅದ್ಧೂರಿಯಾಗಿ ಬರಮಾಡಿಕೊಂಡರು. ಜಿ7 ಶೃಂಗಸಭೆ ನಡೆಯುವ ಸ್ಥಳಕ್ಕೆ ಬಂದ ಮೋದಿಯನ್ನು ಜಪಾನ್ ಪ್ರಧಾನಮಂತ್ರಿ ಫ್ಯುಮಿಯೊ ಕಿಶಿಡಾ ಅವರು ಸ್ವಾಗತಿಸಿದರು.