ಟೋಕಿಯೊ (ಜಪಾನ್): ತಮ್ಮ ಆತ್ಮೀಯ ಗೆಳೆಯ, ಜಪಾನಿನ ದಿವಂಗತ ಪ್ರಧಾನಿ ಶಿಂಜೊ ಅಬೆ (Japanese Prime Minister Shinzo Abe) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯಪೂರ್ವಕ ಸಂತಾಪ ಸೂಚಿಸಿದ್ದಾರೆ. ಟೋಕಿಯೊದಲ್ಲಿ ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ (Fumio Kishida ) ಅವರನ್ನು ಭೇಟಿ ಮಾಡಿದ ಮೋದಿ, ಅಬೆ ತಮ್ಮ ಆತ್ಮೀಯ ಗೆಳೆಯರಾಗಿದ್ದು ಅವರ ಅಗಲಿಕೆಯಿಂದ ವೈಯಕ್ತಿಕವಾಗಿ ನಷ್ಟವಾಗಿದೆ ಎಂದು ತಿಳಿಸಿದರು.
ಇಂದು ನಾವು ದುಃಖದ ಸಮಯದಲ್ಲಿ ಭೇಟಿಯಾಗುತ್ತಿದ್ದೇವೆ. ಕಳೆದ ಬಾರಿ ನಾನಿಲ್ಲಿಗೆ ಬಂದಾಗ ಮಾಜಿ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದೆ. ಭಾರತವು ಶಿಂಜೊ ಅಬೆ ಅವರನ್ನು ಮಿಸ್ ಮಾಡಿಕೊಳ್ಳುತ್ತಿದೆ. ಭಾರತೀಯರು ಅಬೆ ಹಾಗೂ ಜಪಾನ್ ಇಬ್ಬರನ್ನೂ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಜಪಾನ್ ಪ್ರಧಾನಿಯೊಂದಿಗಿನ ದ್ವಿಪಕ್ಷೀಯ ಮಾತುಕತೆಯ ಸಮಯದಲ್ಲಿ ಮೋದಿ ಸ್ಮರಿಸಿದರು.
ಅಬೆ ಭಾರತ ಮತ್ತು ಜಪಾನ್ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು ಮತ್ತು ಅದನ್ನು ಇತರ ಹಲವು ಕ್ಷೇತ್ರಗಳಿಗೆ ವಿಸ್ತರಿಸಿದರು. ಜಾಗತಿಕ ದೃಷ್ಟಿಕೋನದ ಬೆಳವಣಿಗೆಯಲ್ಲಿ ನಮ್ಮ ಸ್ನೇಹವು ಪ್ರಮುಖ ಪಾತ್ರ ವಹಿಸಿದೆ. ಅವರು ಮಾಡಿದ ಎಲ್ಲಾ ಉತ್ತಮ ಕೆಲಸಗಳಿಗಾಗಿ ಭಾರತದ ಜನರು ಅಬೆ ಸಾನ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ನಿಮ್ಮ ನಾಯಕತ್ವದಲ್ಲಿ (ಕಿಶಿಡಾ) ಕೂಡ ಭಾರತ-ಜಪಾನ್ ಸಂಬಂಧಗಳು (India-Japan ties) ಬಲವಾಗಿ ಬೆಳೆದು ಹೊಸ ಎತ್ತರಕ್ಕೆ ತಲುಪಲಿವೆ ಮತ್ತು ವಿಶ್ವದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಾನು ನಂಬುತ್ತೇನೆ ಎಂದು ಭಾರತದ ಪ್ರಧಾನಿ ಮೋದಿ ಹೇಳಿದರು.
ಅಬೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಪಾನ್ ಪ್ರಧಾನಿ ಕಿಶಿಡಾ ಅವರು ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು. ಪಿಎಂ ಮೋದಿ, ಪಿಎಂ ಅಬೆ ಅವರೊಂದಿಗೆ ಭಾರತ-ಜಪಾನ್ ಬಾಂಧವ್ಯವನ್ನು ಬಲಪಡಿಸಿದ್ದಾರೆ ಎಂದರು.