ಕೈರೋ (ಈಜಿಪ್ಟ್): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಈಜಿಪ್ಟ್‌ನ ಗ್ರ್ಯಾಂಡ್ ಮುಫ್ತಿ (ಇಸ್ಲಾಮಿಕ್ ನ್ಯಾಯಶಾಸ್ತ್ರಜ್ಞ) ಶಾಕಿ ಇಬ್ರಾಹಿಂ ಅಬ್ದೆಲ್-ಕರೀಮ್ ಅಲ್ಲಮ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಪ್ರಧಾನಿ ಮೋದಿ ಅವರ ನಾಯಕತ್ವ ಶ್ಲಾಘಿಸಿದ ಗ್ರ್ಯಾಂಡ್ ಮುಫ್ತಿ "ವೈವಿಧ್ಯತೆಯಿಂದ ಕೂಡಿದ ಭಾರತದಲ್ಲಿ ವಿವಿಧ ನಂಬಿಕೆಗಳ (ಧರ್ಮಗಳು) ಜನರ ನಡುವೆ ಸಹಬಾಳ್ವೆಯನ್ನು ತರುವಲ್ಲಿ ಪ್ರಧಾನಿ ಮೋದಿಯವರು ಚಾಣಾಕ್ಷ ನೀತಿಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಭಾರತದ ಕೋಮು ಸೌಹಾರ್ದತೆ, ಸಮಾನ ಹಕ್ಕುಗಳು ಶ್ಲಾಘನೀಯ" ಎಂದು ಅವರು ಹೇಳಿದರು.
"ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ನನಗೆ ಅವಕಾಶ ಸಿಕ್ಕಿತು. ಇದು ತುಂಬಾ ಒಳ್ಳೆಯ ಮತ್ತು ಆಸಕ್ತಿದಾಯಕ ಮಾತುಕತೆ ನಡೆಯಿತು. ಇದು ನಮ್ಮ 2ನೇ ಭೇಟಿ. ಎರಡು ಸಭೆಗಳ ನಡುವೆ, ಭಾರತದಲ್ಲಿ ಮಹತ್ತರವಾದ ಬೆಳವಣಿಗೆಯನ್ನು ನಾನು ಗಮನಿಸಿದ್ದೇನೆ. ಅವರು ಭಾರತದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ವಾಸ್ತವವಾಗಿ ಅವರು ಭಾರತದಂತಹ ದೊಡ್ಡ ದೇಶಕ್ಕೆ ಬುದ್ಧಿವಂತ ನಾಯಕತ್ವ ನೀಡುತ್ತಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
"ಭಾರತದಲ್ಲಿನ ವಿವಿಧ ಧರ್ಮೀಯರ ನಡುವೆ ಸಹಬಾಳ್ವೆಯನ್ನು ತರುವಲ್ಲಿ ಪ್ರಧಾನಿಯವರ ನಾಯಕತ್ವ ಮೆಚ್ಚುವಂಥದ್ದು. ಧಾರ್ಮಿಕ ಮಟ್ಟದಲ್ಲಿ ನಾವು ಭಾರತದೊಂದಿಗೆ ಬಲವಾದ ಸಹಕಾರವನ್ನು ಹೊಂದಿದ್ದೇವೆ. ಭಾರತ ಇಲ್ಲಿ ಮಾಹಿತಿ ತಂತ್ರಜ್ಞಾನ ಕೇಂದ್ರದಲ್ಲಿ ಉತ್ಕೃಷ್ಟತೆ ಒದಗಿಸಲಿದ್ದಾರೆ. ಇದಕ್ಕೆ ನಮ್ಮ ಸಹಕಾರವಿದೆ" ಎಂದು ಅವರು ಹೇಳಿದರು.
ಶನಿವಾರ ಮುಂಜಾನೆ ಈಜಿಪ್ಟ್‌ಗೆ ತಮ್ಮ ಚೊಚ್ಚಲ ರಾಜ್ಯ ಪ್ರವಾಸ ಕೈಗೊಂಡಿರುವ ಮೋದಿ ಕೈರೋದಲ್ಲಿ ಗ್ರ್ಯಾಂಡ್ ಮುಫ್ತಿ ಅವರನ್ನು ಭೇಟಿಯಾದರು. ಈ ವೇಳೆ ಮುಫ್ತಿ ಅವರು ಪ್ರಧಾನಿ ಮೋದಿಯವರಿಗೆ ವಿಶೇಷ ಉಡುಗೊರೆ ನೀಡಿದರು. ಬಳಿಕ ತಮ್ಮ ಇತ್ತೀಚಿನ ಭಾರತ ಭೇಟಿಯನ್ನು ಪ್ರೀತಿಯಿಂದ ನೆನಪಿಸಿಕೊಂಡಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ನಡೆದ ಸೂಫಿ ಸಮಾವೇಶವೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದೆ ಎಂದು ಮುಫ್ತಿ ಸ್ಮರಿಸಿದರು.