ಟೋಕಿಯೊ (ಜಪಾನ್): ಜಪಾನ್ನ ಹಿರೋಷಿಮಾದಲ್ಲಿ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮುಖಾಮುಖಿಯಾಗಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಿದರು. ಕಳೆದ ವರ್ಷ ಫೆಬ್ರವರಿಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಆರಂಭವಾದ ನಂತರ ಮೊದಲ ಬಾರಿಗೆ ಉಭಯ ನಾಯಕರು ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾತುಕತೆ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಭಾಗವಹಿಸಿದ್ದರು. ಈ ವೇಳೆ, ಮಾತನಾಡಿದ ಪ್ರಧಾನಿ ಮೋದಿ, ಉಕ್ರೇನ್ ಯುದ್ಧವು ವಿಶ್ವದ ದೊಡ್ಡ ಸಮಸ್ಯೆಯಾಗಿದೆ. ನಾನು ಇದನ್ನು ಕೇವಲ ಆರ್ಥಿಕ, ರಾಜಕೀಯದ ಸಮಸ್ಯೆ ಎಂದು ಪರಿಗಣಿಸುವುದಿಲ್ಲ, ಇದು ಮಾನವೀಯತೆಯ ಸಮಸ್ಯೆಯಾಗಿದೆ. ಮಾನವೀಯ ಮೌಲ್ಯದ ಸಮಸ್ಯೆಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಜಪಾನ್ ಪ್ರವಾಸದಲ್ಲಿ ಪ್ರಧಾನಿ ಮೋದಿ.. ಹಿರೋಶಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ
ಉಕ್ರೇನ್ನಿಂದ ವಾಪಸ್ ಆದ ನಮ್ಮ ಯುವಕರು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದನ್ನು ಕೇಳಿ ಉಕ್ರೇನ್ ನಾಗರಿಕರ ವೇದನೆ ನಮಗೆ ಅರ್ಥವಾಗುತ್ತಿತ್ತು. ಇದರ ಪರಿಹಾರಕ್ಕೆ ಭಾರತ ಮತ್ತು ನಾನು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಈ ಕುರಿತು ಪ್ರಧಾನಿ ಕಚೇರಿ ಟ್ವೀಟ್ ಮಾಡಿದ್ದು, ಹಿರೋಷಿಮಾದಲ್ಲಿ ನಡೆದ ಜಿ- 7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದರು ಎಂದು ತಿಳಿಸಿದೆ.
ಈ ಹಿಂದೆ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿದ್ದಾರೆ. ಶಾಂತಿ ನಿರ್ಮಾಣದ ಯಾವುದೇ ಪ್ರಯತ್ನದಲ್ಲಿ ಸಹಕರಿಸಲು ಭಾರತ ಸಿದ್ಧ ಇರುತ್ತದೆ ಎಂದು ಮೋದಿ ಹೇಳಿದ್ದರು.
ಜಪಾನಿನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಜಪಾನ್‌ಗೆ ತೆರಳಿದ್ದಾರೆ. ಮೇ 21ರವರೆಗೆ ಜಿ7 ಶೃಂಗಸಭೆಗಾಗಿ ಮೋದಿ ಹಿರೋಷಿಮಾದಲ್ಲಿ ಇರುತ್ತಾರೆ. ಆಹಾರ, ರಸಗೊಬ್ಬರ ಮತ್ತು ಇಂಧನ ಭದ್ರತೆ ಸೇರಿದಂತೆ ಜಾಗತಿಕ ಸವಾಲುಗಳ ಕುರಿತು ಮಾತನಾಡುವ ನಿರೀಕ್ಷೆಯಿದೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸಹ ಜಪಾನ್ ಅಧ್ಯಕ್ಷರ ಆಹ್ವಾನದ ಮೇರೆಗೆ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಜಿ7 ಅಮೆರಿಕ, ಫ್ರಾನ್ಸ್, ಬ್ರಿಟನ್, ಇಟಲಿ, ಜರ್ಮನಿ, ಕೆನಡಾ ಮತ್ತು ಜಪಾನ್ ಸೇರಿ ಏಳು ರಾಷ್ಟ್ರಗಳು ಪ್ರತಿನಿಧಿಸುವ ಗುಂಪಾಗಿದ್ದು, ಇದರ ಅಧ್ಯಕ್ಷತೆ ವಹಿಸಿರುವ ಜಪಾನ್ ಎಲ್ಲ ಏಳು ದೇಶಗಳನ್ನು ಶೃಂಗಸಭೆಗೆ ಅತಿಥಿಗಳಾಗಿ ಆಹ್ವಾನಿಸಿದೆ.
ಕಳೆದ ತಿಂಗಳು ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಎಮಿನ್ ಝಪರೋವಾ ಭಾರತಕ್ಕೆ ಭೇಟಿ ಕೊಟ್ಟಿದ್ದರು. ಉಕ್ರೇನ್ ವಿರುದ್ಧ ರಷ್ಯಾ ದಾಳಿ ಆರಂಭವಾದ ನಂತರ ಉಕ್ರೇನ್‌ನ ಪ್ರಮುಖ ನಾಯಕರೊಬ್ಬರು ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿತ್ತು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರವನ್ನು ಜಾಪರೋವಾ ಅವರು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರಿಗೆ ಪತ್ರವನ್ನು ಹಸ್ತಾಂತರಿಸಿದ್ದರು.
ಇದನ್ನೂ ಓದಿ:ಪ್ರಧಾನಿ ಮೋದಿ ಬಳಿಗೇ ಬಂದು ಆಲಂಗಿಸಿಕೊಂಡ ಅಮೆರಿಕದ ಅಧ್ಯಕ್ಷ ಬೈಡನ್: ವಿಡಿಯೋ