ಅಥೆನ್ಸ್ (ಗ್ರೀಸ್) : ಪ್ರಧಾನಿ ನರೇಂದ್ರ ಮೋದಿ ಅವರ ಗ್ರೀಸ್ ಪ್ರವಾಸ ಶುಕ್ರವಾರ ಮುಕ್ತಾಯಗೊಂಡಿದ್ದು ಅಥೆನ್ಸ್‌ನಿಂದ ಮರಳಿ ಭಾರತಕ್ಕೆ ಆಗಮಿಸಿದ್ದಾರೆ. ಈ ಬೆನ್ನಲ್ಲೇ ಇಂದು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಆಗಸ್ಟ್ 21 ರಂದು ದಕ್ಷಿಣ ಆಫ್ರಿಕಾ ಮತ್ತು ಗ್ರೀಕ್ಗೆ ನಾಲ್ಕು ದಿನಗಳ ಔಪಚಾರಿಕ ಪ್ರವಾಸ ಪ್ರಾರಂಭಿಸಿದ್ದ ಮೋದಿ, ಆಗಸ್ಟ್ 22-24 ರವರೆಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿನ ಅಧ್ಯಕ್ಷ ಮಟಮೆಲಾ ಸಿರಿಲ್ ರಮಾಫೋಸಾ ಅವರ ಆಹ್ವಾನದ ಮೇರೆಗೆ ಭಾಗವಹಿಸಿದ್ದರು.
ಗ್ರೀಸ್ ಭೇಟಿಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಮತ್ತು ಅಧ್ಯಕ್ಷೆ ಕಟೆರಿನಾ ಎನ್ ಸಕೆಲ್ಲರೊಪೌಲೌ ಅವರೊಂದಿಗೆ ಕೆಲ ಸಭೆಗಳನ್ನು ನಡೆಸಿದರು. ಬಳಿಕ, ಅಥೆನ್ಸ್‌ನಲ್ಲಿ ಪ್ರಧಾನಿ ಮೋದಿಯವರಿಗೆ ಗ್ರೀಸ್ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅಧ್ಯಕ್ಷೆ ಕಟರೀನಾ ಸಕೆಲ್ಲರೊಪೌಲೌ ಅವರು ಮೋದಿಯವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ಪ್ರಶಸ್ತಿ ಪ್ರಧಾನ ಮಾಡಿದರು. ಕಳೆದ 40 ವರ್ಷಗಳಲ್ಲಿ ಗ್ರೀಸ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ ಅವರಾಗಿದ್ದು, 1983 ರಲ್ಲಿ ಕೊನೆಯದಾಗಿ ಭೇಟಿ ನೀಡಲಾಗಿತ್ತು.
ಗ್ರೀಕ್ ಭೇಟಿಯ ಅಂಗವಾಗಿ ವ್ಯಾಪಾರ ಸಮುದಾಯ, ಅನಿವಾಸಿ ಭಾರತೀಯರು ಹಾಗೂ ಪ್ರಮುಖ ಗಣ್ಯರೊಂದಿಗೆ ಮೋದಿ ಸಂವಾದ ನಡೆಸಿದರು. ಇದಕ್ಕೂ ಮುನ್ನ ಶುಕ್ರವಾರ ಬೆಳಗ್ಗೆ 'ಅಜ್ಞಾತ ಸೈನಿಕರ ಸಮಾಧಿ'ಗೆ ಅವರು ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲದೇ, ಅಥೆನ್ಸ್ಗೆ ಬಂದಿಳಿದ ಅವರಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪ್ರಧಾನಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.
ದ್ವಿಪಕ್ಷೀಯ ಒಪ್ಪಂದ: ಇನ್ನು ಎರಡೂ ದೇಶಗಳು ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡವು. "ಕಾರ್ಯತಂತ್ರದ ಪಾಲುದಾರಿಕೆ ಸಂಬಂಧಿಸಿದಂತೆ ಉಭಯ ದೇಶಗಳ ರಾಜಕೀಯ, ಭದ್ರತೆ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಕೆಲಸ ಮಾಡುವುದಾಗಿ ಒಪ್ಪಿಕೊಂಡಿವೆ ಎಂದು ಭಾರತ-ಗ್ರೀಸ್ ಜಂಟಿಯಾಗಿ ಹೇಳಿಕೆಯಲ್ಲಿ ಒತ್ತಿಹೇಳಿದೆ.