ಲುಂಬಿನಿ (ನೇಪಾಳ):ಮೋದಿ ನೇಪಾಳ ಭೇಟಿ ಮಹತ್ವದಾಗಿದ್ದು, ಗೌತಮ ಬುದ್ಧನ ಜನ್ಮಸ್ಥಳವಾದ ಲುಂಬಿನಿಗೆ ಬುದ್ಧ ಪೂರ್ಣಿಮೆಯಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಜೊತೆಗೆ ಜಲವಿದ್ಯುತ್, ಅಭಿವೃದ್ಧಿ, ಸಂಪರ್ಕ ಸೇರಿದಂತೆ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸಲು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರೊಂದಿಗೆ ಸಮಗ್ರ ಮಾತುಕತೆ ನಡೆಸಲಿದ್ದಾರೆ.
ದೇವುಬಾ ಅವರ ಆಹ್ವಾನದ ಮೇರೆಗೆ ತೆರಳಿದ್ದು, 2014 ರಿಂದ ಇದು ಮೋದಿ ಅವರ 5ನೇ ನೇಪಾಳ ಭೇಟಿಯಾಗಿದೆ. ಪ್ರಧಾನಿ ಮೋದಿ ಮತ್ತು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಮತ್ತು ಅವರ ಪತ್ನಿ ಡಾ. ಅರ್ಜು ರಾಣಾ ದೇವುಬಾ ಅವರು ಮಾಯಾದೇವಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಲುಂಬಿನಿ ಮೊನಾಸ್ಟಿಕ್ ವಲಯದಲ್ಲಿ ದೆಹಲಿಯ ಇಂಟರ್ ನ್ಯಾಷನಲ್ ಬೌದ್ಧ ಒಕ್ಕೂಟದ (ಐಬಿಸಿ) ಪ್ಲಾಟ್‌ನಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯ ನೆರವೇರಿಸಿದರು.