ಟೋಕಿಯೋ (ಜಪಾನ್):ಇಂಡೋ-ಪೆಸಿಫಿಕ್, ಜಾಗತಿಕ ಸಮಸ್ಯೆಗಳು ಹಾಗೂ ಪ್ರಭಾವಿ ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಹಿನ್ನೆಲೆಯಲ್ಲಿ ಟೋಕಿಯೋ ನಗರದಲ್ಲಿ ನಡೆಯಲಿರುವ ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳಲು ಇಂದು ಜಪಾನ್‌ನ ಟೋಕಿಯೋಗೆ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿಯನ್ನು ಜಪಾನ್ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಆತ್ಮೀಯವಾಗಿ ಸ್ವಾಗತಿಸಿದರು.
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಮೋದಿ ಟೋಕಿಯೋಗೆ 2 ದಿನಗಳ ಕಾಲ ಭೇಟಿ ನೀಡಿದ್ದಾರೆ. ಕಳೆದ 8 ವರ್ಷಗಳಲ್ಲಿ ಜಪಾನ್‌ಗೆ ಐದನೇ ಭೇಟಿ ಇದಾಗಿದ್ದು, ಮೋದಿ ಅವರನ್ನು ಟೋಕಿಯೋದಲ್ಲಿ ಆತ್ಮೀಯವಾಗಿ ಸ್ವಾಗತಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಮೇ 24 ರಂದು ಟೋಕಿಯೋದಲ್ಲಿ ನಡೆಯಲಿರುವ ಕ್ವಾಡ್ ಶೃಂಗದಲ್ಲಿ ಮೋದಿ ಮಾತ್ರವಲ್ಲದೇ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಷಿದಾ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಆಸ್ಟ್ರೇಲಿಯಾದ ನಿಯೋಜಿತ ಆಂಥೋನಿ ಅಲ್ಬನೀಸ್ ಭಾಗವಹಿಸಲಿದ್ದಾರೆ. ಕ್ವಾಡ್ ಭದ್ರತಾ ಸಂವಾದವು ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿದೆ.