ಅಮೆರಿಕ ನಂತರ ಪ್ರಧಾನಿ ಮೋದಿ ಈಜಿಪ್ಟ್ ಪ್ರವಾಸ: ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸಿದ ಈಜಿಪ್ಟ್ ಪಿಎಂ ಕೈರೋ (ಈಜಿಪ್ಟ್): ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ನಂತರ ಈಜಿಪ್ಟ್‌ಗೆ ಆಗಮಿಸಿದ್ದಾರೆ. ಪ್ರಧಾನಿ ಮೋದಿ ಅವರ ಅಮೆರಿಕ ಹಾಗೂ ಈಜಿಪ್ಟ್ ಎರಡು ರಾಷ್ಟ್ರಗಳ ಪ್ರವಾಸದ ಎರಡನೇ ಹಂತ ಇದ್ದು, ಈಜಿಪ್ಟ್‌ನ ರಾಜಧಾನಿ ಕೈರೋಗೆ ಇಂದು ಬಂದಿಳಿದರು.
ಜೂನ್ 20ರಂದು ದೆಹಲಿಯಿಂದ ಎರಡು ರಾಷ್ಟ್ರಗಳ ಭೇಟಿಗಾಗಿ ಪ್ರಧಾನಿ ಮೋದಿ ಪ್ರಯಾಣ ಬೆಳೆಸಿದ್ದರು. ಮೊದಲು ಅಮೆರಿಕಕ್ಕೆ ಭೇಟಿ ಕೊಟ್ಟಿದ್ದ ಅವರು ಇಂದು ಈಜಿಪ್ಟ್‌ಗೆ ಬಂದಿದ್ದಾರೆ. ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಜನವರಿಯಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಬ್ದೆಲ್ ಫತ್ತಾಹ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಗ ಪ್ರಧಾನಿ ಮೋದಿ ಅವರಿಗೆ ಈಜಿಪ್ಟ್ ಗೆ ಆಗಮಿಸುವಂತೆ ಆಹ್ವಾನ ನೀಡಿದ್ದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಅಮೆರಿಕದ ಹೊಸ ಕಾನ್ಸುಲೇಟ್.. ನಮ್ಮೆಲ್ಲ ಒಪ್ಪಂದಗಳು ಜಗತ್ತನ್ನ ಮತ್ತಷ್ಟು ಉತ್ತಮಗೊಳಿಸುವಂತಹುದ್ದಾಗಿವೆ.. ಪ್ರಧಾನಿ ಮೋದಿ ಬಣ್ಣನೆ
ಇದು ಪ್ರಧಾನಿಯಾಗಿ ಮೋದಿಯವರ ಮೊದಲ ಈಜಿಪ್ಟ್ ಭೇಟಿಯಾಗಿದೆ. 26 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಕೈರೋಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಗೌರವ ರಕ್ಷೆಯೊಂದಿಗೆ ಸ್ವಾಗತಿಸಲಾಯಿತು. ವಿಮಾನ ನಿಲ್ದಾಣದಲ್ಲಿ ಈಜಿಪ್ಟ್ ಪ್ರಧಾನಿ ಮೋಸ್ಟಾಫಾ ಮಡ್ಬೌಲಿ ಅವರು ಮೋದಿ ಅವರನ್ನು ಬರಮಾಡಿಕೊಂಡರು.
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಈಜಿಪ್ಟ್ನಲ್ಲಿ ಮೋದಿ ಇರಲಿದ್ದು, ಇಲ್ಲಿನ ಪ್ರಧಾನಿಯೊಂದಿಗೆ ದುಂಡು ಮೇಜಿನ ಸಭೆ ನಡೆಸಲಿದ್ದಾರೆ. ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅವರನ್ನು ಭೇಟಿಯಾಗಲಿದ್ದಾರೆ. ನಂತರ ಭಾರತೀಯ ಸಮುದಾಯದೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಇಂದು ಈಜಿಪ್ಟ್‌ನ ಗ್ರಾಂಡ್ ಮುಫ್ತಿ ಡಾ. ಶಾಕಿ ಇಬ್ರಾಹಿಂ ಅಬ್ದೆಲ್ ಕರೀಮ್ ಅಲ್ಲಮ್ ಅವರನ್ನೂ ಮೋದಿ ಭೇಟಿಯಾಗಲಿದ್ದಾರೆ.
ಇದನ್ನೂ ಓದಿ:ಭಾರತ ಮತ್ತು ಅಮೆರಿಕ ಸಂಬಂಧ ಆಕಾಶದಂತೆ ಮಿತಿಯೇ ಇಲ್ಲ: ಜಂಟಿ ಅಧಿವೇಶನದಲ್ಲಿ ಕವಿತೆ ಓದಿ ಮಂತ್ರ ಮುಗ್ದಗೊಳಿಸಿದ ಮೋದಿ
ನಾಳೆ ಮಸೀದಿಗೆ ಮೋದಿ ಭೇಟಿ: ಭಾನುವಾರ ಪ್ರಧಾನಿ ಮೋದಿ 11ನೇ ಶತಮಾನದ ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ. 16ನೇ ಫಾತಿಮಿದ್ ಖಲೀಫ್ ಅಲ್-ಹಕೀಮ್ ಬಿ-ಅಮ್ರ್ ಅಲ್ಲಾ (985-1021) ಅವರ ಹೆಸರಿನ ಕೈರೋದಲ್ಲಿನ ಐತಿಹಾಸಿಕ ಮತ್ತು ಪ್ರಮುಖ ಮಸೀದಿಯಾದ ಅಲ್-ಹಕೀಮ್ ಮಸೀದಿಯಲ್ಲಿ ಪ್ರಧಾನಿ ಸುಮಾರು ಅರ್ಧ ಗಂಟೆ ಕಳೆಯಲಿದ್ದಾರೆ.
ಜೊತೆಗೆ ಮೊದಲ ವಿಶ್ವಯುದ್ಧದ ಸಮಯದಲ್ಲಿ ಈಜಿಪ್ಟ್‌ಗಾಗಿ ಪ್ರಾಣತ್ಯಾಗ ಮಾಡಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲು ಹೆಲಿಯೊಪೊಲಿಸ್ ವಾರ್ ಗ್ರೇವ್ ಸ್ಮಾರಕಕ್ಕೂ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಈಜಿಪ್ಟ್ ಸಾಂಪ್ರದಾಯಿಕವಾಗಿ ಆಫ್ರಿಕನ್ ಖಂಡದಲ್ಲಿ ಭಾರತದ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿರುವುದರಿಂದ ಮೋದಿ ಅವರ ಈ ಭೇಟಿಯು ಮಹತ್ವ ಪಡೆದಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ಭಾಷಣಕ್ಕೆ ಅಮೆರಿಕ ಸಂಸತ್ತು ಫಿದಾ.. 75 ಬಾರಿ ಚಪ್ಪಾಳೆ, 15ಕ್ಕೂ ಹೆಚ್ಚು ಬಾರಿ ನಿಂತು ಗೌರವ ಸೂಚನೆ!!