ವೆಸ್ಟ್ ಪಾಮ್ ಬೀಚ್(ಅಮೆರಿಕ): ಪ್ರಯಾಣಿಕನೊಬ್ಬ ಸಣ್ಣ ವಿಮಾನವೊಂದನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಿ ಅಚ್ಚರಿ ಸೃಷ್ಟಿಸಿರುವ ಘಟನೆ ಅಮೆರಿಕದ ಫ್ಲೋರಿಡಾದ ಅಟ್ಲಾಂಟಿಕ್ ಕರಾವಳಿಯ ಪಾಮ್ ಬೀಚ್ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಮಂಗಳವಾರ ಈ ಘಟನೆ ನಡೆದಿದೆ. ಪ್ರಯಾಣಿಕನ ಸಾಹಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಂಗಳವಾರ ಬೆಳಗ್ಗೆ ಬಹಮಾಸ್ನಲ್ಲಿರುವ ಮಾರ್ಷ್ ಹಾರ್ಬರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ಸಣ್ಣ ವಿಮಾನ ಹೊರಟಿದೆ. ಹಾರಾಟದ ಸ್ವಲ್ಪ ಸಮಯದ ಬಳಿಕ ಪೈಲಟ್ ಅನಾರೋಗ್ಯಕ್ಕೀಡಾಗಿದ್ದು, ಪ್ರಜ್ಞೆ ತಪ್ಪಿದ್ದಾರೆ. ಈ ವೇಳೆ ಪ್ರಯಾಣಿಕ ಕಾಕ್‌ಪಿಟ್ ರೇಡಿಯೊ ಬಳಸಿ ತುರ್ತು ಸಹಾಯಕ್ಕಾಗಿ ಮನವಿ ಮಾಡಿದ್ದಾನೆ. ವಿಮಾನದ ಪರಿಸ್ಥಿತಿಯನ್ನು ವಿಮಾನ ಸಂಚಾರ ನಿಯಂತ್ರಣ (ಎಟಿಸಿ) ಅಧಿಕಾರಿಗಳಿಗೆ ಗೊತ್ತಾಗಿದೆ.
ನಾನು ಇಲ್ಲಿ ತುಂಬಾ ಗಂಭೀರ ಪರಿಸ್ಥಿತಿಯಲ್ಲಿದ್ದೇನೆ. ನನಗೆ ವಿಮಾನ ಹೇಗೆ ಹಾರಿಸಬೇಕೆಂದು ಗೊತ್ತಿಲ್ಲ. ನಾನು ಈಗ ಫ್ಲೋರಿಡಾದ ಕರಾವಳಿಯ ಸಮೀಪದಲ್ಲಿದ್ದೇನೆ ಎಂದು ಪ್ರಯಾಣಿಕ ಹೇಳಿಕೊಂಡಿದ್ದೇನೆ. ನಂತರ ವಿಮಾನದ ಸ್ಥಳವನ್ನು ಪತ್ತೆ ಮಾಡಿದ ಅಧಿಕಾರಿಗಳು ಅವನನ್ನು ರಕ್ಷಿಸಲು ಮುಂದಾಗಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕನ ಧ್ವನಿ ಅಸ್ಪಷ್ಟವಾಗುತ್ತಿದ್ದಂತೆ ಆತನ ಫೋನ್ ನಂಬರ್ ತೆಗೆದುಕೊಂಡು ಆತನ ಜೊತೆ ಸಂವಹನ ನಡೆಸಿದ್ದಾರೆ. ಸುರಕ್ಷಿತವಾಗಿ ಲ್ಯಾಂಡ್ ಮಾಡಿಸುವಲ್ಲಿ ಸಫಲರಾಗಿದ್ದಾರೆ.