ಟೋಕಿಯೊ (ಜಪಾನ್):ವಿನಾಶವಾಗಿರುವ ಫುಕುಶಿಮಾ ಪರಮಾಣು ವಿದ್ಯುತ್ ಸ್ಥಾವರದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪೆಸಿಫಿಕ್ ಮಹಾಸಾಗರಕ್ಕೆ ಬಿಡುಗಡೆ ಮಾಡುವ ಎರಡನೇ ಹಂತದ ಕಾರ್ಯಾಚರಣೆಯನ್ನು ಜಪಾನ್ ಗುರುವಾರ ಪ್ರಾರಂಭಿಸಿದೆ. ಎರಡನೇ ಹಂತದ ಡಿಸ್ಚಾರ್ಜ್ ಬೆಳಗ್ಗೆ 10.30 ರ ಸುಮಾರಿಗೆ (ಸ್ಥಳೀಯ ಸಮಯ) ಪ್ರಾರಂಭವಾಗಿದೆ ಮತ್ತು ಇದು ಅಕ್ಟೋಬರ್ 23 ರವರೆಗೆ ಮುಂದುವರಿಯಲಿದೆ.
ಎರಡನೇ ಹಂತದಲ್ಲಿ ಅಕ್ಟೋಬರ್ 23ರವರೆಗೆ ಒಟ್ಟು 7,800 ಟನ್ ಸಂಸ್ಕರಿಸಿದ ಅಣುತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುಗಡೆ ಮಾಡಲಾಗುವುದು. ಇದು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾದ ನೀರಿನ ಮೊತ್ತಕ್ಕೆ ಸಮನಾಗಿದೆ. ಪ್ರತಿದಿನ ಸುಮಾರು 460 ಟನ್ ನೀರನ್ನು ಸಮುದ್ರಕ್ಕೆ ಹರಿಸಲಾಗುವುದು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಏನಿದು ಕಸ್ಟಮ್ ಶುದ್ದೀಕರಣ ವ್ಯವಸ್ಥೆ?:ಮಾರ್ಚ್ 2011 ರಲ್ಲಿ ಫುಕುಶಿಮಾ ಅಣುಸ್ಥಾವರ ಹಾನಿಗೀಡಾಗಿತ್ತು. ಅಂದಿನಿಂದ ಅಡ್ವಾನ್ಸ್ಡ್ ಲಿಕ್ವಿಡ್ ಪ್ರೊಸೆಸಿಂಗ್ ಸಿಸ್ಟಮ್ (ಎಎಲ್ಪಿಎಸ್) ಎಂದು ಕರೆಯಲ್ಪಡುವ ಕಸ್ಟಮ್ ಶುದ್ಧೀಕರಣ ವ್ಯವಸ್ಥೆಯ ಮೂಲಕ ಅಣುತ್ಯಾಜ್ಯ ನೀರನ್ನು ಸಂಸ್ಕರಿಸಿದ ನಂತರ ಅದನ್ನು ಟ್ಯಾಂಕ್ಗಳಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ. ಫುಕುಶಿಮಾ ಸ್ಥಾವರವನ್ನು ನಿರ್ವಹಿಸುವ ಹೊಣೆ ಹೊತ್ತಿರುವ ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪನಿ ಈಗ ಸಮುದ್ರದೊಳಗೆ 1 ಕಿಮೀ ಉದ್ದದ ಪೈಪ್ಗಳ ಮೂಲಕ ಈ ನೀರನ್ನು ಬಿಡುಗಡೆ ಮಾಡುತ್ತಿದೆ.