ಲಿಮಾ (ಪೆರು): ಮಾಜಿ ಅಧ್ಯಕ್ಷ ಪೆಡ್ರೊ ಕ್ಯಾಸ್ಟಿಲ್ಲೊ ಅವರನ್ನು ಪದಚ್ಯುತಗೊಳಿಸಿದ ಹಿನ್ನೆಲೆ ಪೆರು ದೇಶದಲ್ಲಿ ಆಂತರಿಕ ಬಿಕ್ಕಟ್ಟು ಎದುರಿಸುತ್ತಿದೆ. ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ಪ್ರತಿಭಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆಯಾಗಿದ್ದು, ಪೆರುವಿಯನ್ ಪ್ರಾಂತ್ಯದ ಪುನೊದಲ್ಲಿ ಪ್ರತಿಭಟನಾಕಾರರು ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ದಾಳಿ ನಡೆಸಿ ಸುಟ್ಟು ಕೊಂದು ಹಾಕಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. 29 ವರ್ಷದ ಪೊಲೀಸ್ ಅಧಿಕಾರಿ ಜೋಸ್ ಲೂಯಿಸ್ ಸೊಂಕೊ ಕ್ವಿಸ್ಪೆ ಅವರು ಸೋಮವಾರ ರಾತ್ರಿ ಬೊಲಿವಿಯಾ ಮತ್ತು ಟಿಟಿಕಾಕಾ ಸರೋವರದ ಗಡಿಯ ಸಮೀಪವಿರುವ ಜೂಲಿಯಾಕಾದಲ್ಲಿ ಸಹ ಅಧಿಕಾರಿಯೊಂದಿಗೆ ಗಸ್ತು ತಿರುಗುತ್ತಿದ್ದರು. ಅದೇ ಸಮಯದಲ್ಲಿ ಗುಂಪೊಂದು ಅವರ ಮೇಲೆ ದಾಳಿ ಮಾಡಿ ಅವರ ವಾಹನಕ್ಕೆ ಬೆಂಕಿ ಹಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಸ್ತು ಕಾರಿನಲ್ಲಿದ್ದ ಸೊಂಕೊ ಅವರ ಸಹವರ್ತಿ ರೊನಾಲ್ಡ್ ವಿಲ್ಲಾಸಾಂಟೆ ಟೋಕ್ ಈ ಬಗ್ಗೆ ಮಾತನಾಡಿ, ಕೆಲ ಜನರನ್ನು ಸುಮಾರು 350 ಪ್ರತಿಭಟನಾಕಾರರು ಸೇರಿ ಬಂಧಿಸಿದ್ದಾರೆ ಮತ್ತು ಅವರ ಮೇಲೆ ದೈಹಿಕವಾಗಿ ದಾಳಿ ಮಾಡಿದ್ದಾರೆ ಎಂದು ಹೇಳಿದರು. ಥಳಿಸಿದ ನಂತರ ವಿಲ್ಲಾಸಾಂಟೆ ತಲೆಗೆ ಅನೇಕ ಗಾಯಗಳಾಗಿದ್ದವು. ನಂತರ ಅವರನ್ನು ಲಿಮಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತನ್ನ ಸಹವರ್ತಿ ಸೊಂಕೊ ಅವರಿಗೆ ಏನಾಗಿದೆ ಎಂಬುದು ಬಗ್ಗೆ ತನಗೆ ತಿಳಿದಿಲ್ಲ ಎಂದು ಅವರು ಹೇಳಿದರು.
ದೇಶದ ಸಂಸತ್ ಅಧಿವೇಶನದಲ್ಲಿ ಸೊಂಕೊ ಅವರ ಸಾವನ್ನು ಪ್ರಧಾನಿ ಅಲ್ಬರ್ಟೊ ಒಟಾರೊಲಾ ದೃಢಪಡಿಸಿದರು. ಪ್ರತಿಭಟನಾಕಾರರ ದಾಳಿಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದರು. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದಾಗ ಒಬ್ಬ ಅಧಿಕಾರಿಯನ್ನು ಥಳಿಸಿ ಕಟ್ಟಿಹಾಕಿರುವುದನ್ನು ನೋಡಿದ್ದರು. ಆದರೆ ಇನ್ನೊಬ್ಬ ಅಧಿಕಾರಿ ಲೂಯಿಸ್ ಸೊಂಕೊ ಕ್ವಿಸ್ಪೆ ಅಷ್ಟರಲ್ಲೇ ಸಾವಿಗೀಡಾಗಿದ್ದರು. ಅವರ ಗಸ್ತು ಕಾರಿನಲ್ಲಿಯೇ ಅವರನ್ನು ಜೀವಂತವಾಗಿ ಸುಡಲಾಯಿತು.