ನ್ಯೂಯಾರ್ಕ್:ಲೋವರ್ ಮ್ಯಾನ್‌ಹ್ಯಾಟನ್‌ನಲ್ಲಿ ಮಂಗಳವಾರ ಪಾರ್ಕಿಂಗ್ ಗ್ಯಾರೇಜ್ ಕುಸಿದು ಒರ್ವ ಕಾರ್ಮಿಕ ಸಾವನ್ನಪ್ಪಿ, ಐವರು ಗಾಯಗೊಂಡಿದ್ದಾರೆ ಎಂದು ನ್ಯೂಯಾರ್ಕ್ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಾಂಕ್ರಿಟ್ ಮಹಡಿಗಳು ಒಂದರ ಮೇಲೊಂದು ಬಿದ್ದಿದ್ದರಿಂದ ಕಾರುಗಳು ನುಜ್ಜುಗುಜ್ಜಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾರ್ಕಿಂಗ್ ಗ್ಯಾರೇಜ್ ನಾಲ್ಕು ಅಂತಸ್ತಿನ ಕಟ್ಟಡವಾಗಿತ್ತು ಎಂದು ನ್ಯೂಯಾರ್ಕ್ ಸಿಟಿ ಕಟ್ಟಡಗಳ ವಿಭಾಗದ ಕಾರ್ಯನಿರ್ವಾಹಕ ಆಯುಕ್ತ ಕಾಜಿಮಿರ್ ವಿಲೆಂಚಿಕ್ ಹೇಳಿದರು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ತುಣುಕೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಲೋವರ್ ಮ್ಯಾನ್‌ಹ್ಯಾಟನ್‌ನಲ್ಲಿ ಕಟ್ಟಡ ಕುಸಿದು ಕಾಂಕ್ರೀಟ್ ಮಹಡಿಗಳು ಒಂದರ ಮೇಲೊಂದು ಬಿದ್ದಿದ್ದರಿಂದ ಕಾರುಗಳು ನಜ್ಜುಗುಜ್ಜಾಗಿರುವುದು ಗೋಚರಿಸುತ್ತದೆ.
ಮೇಲಿನ ಮಹಡಿಯಲ್ಲಿ ಸಿಲುಕಿದ್ದ ಒಬ್ಬ ಗ್ಯಾರೇಜ್ ಉದ್ಯೋಗಿಯನ್ನು ನೆರೆಯ ಛಾವಣಿಯ ಮೂಲಕ ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ಮುಖ್ಯಸ್ಥ ಜಾನ್ ಎಸ್ಪೊಸಿಟೊ ಅವರು ಹೇಳಿದರು. ಕನಿಷ್ಠ ಆರು ಪಾರ್ಕಿಂಗ್ ಗ್ಯಾರೇಜ್ ಕಾರ್ಮಿಕರನ್ನು ಅಲ್ಲಿಂದ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲೇ ಒಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್, ನಾಲ್ವರ ಆರೋಗ್ಯ ಸ್ಥಿರವಾಗಿದ್ದು, ಒಬ್ಬರು ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಮೂರಂಸ್ತಿನ ರೈಸ್ ಮಿಲ್ ಕಟ್ಟಡ ಕುಸಿತ: ಇಬ್ಬರ ಸಾವು, 30 ಕ್ಕೂ ಅಧಿಕ ಮಂದಿ ನಾಪತ್ತೆ
"ನಾವು ನಮ್ಮ ರೋಬೋಟ್ ನಾಯಿಯನ್ನು ಕಟ್ಟಡದೊಳಗೆ ನಿಯೋಜಿಸಿದ್ದೇವೆ. ಅದು ನಮಗೆ ವಿಡಿಯೋವನ್ನು ನೀಡಲು ಸಾಧ್ಯವಾಯಿತು ಮತ್ತು ನಂತರ ಹುಡುಕಾಟ ನಡೆಸಲು ನಾವು ಒಳಗೆ ಡ್ರೋನ್‌ಗಳನ್ನು ಹಾರಿಸಿದ್ದೇವೆ ಎಂದು ಜಾನ್ ಎಸ್ಪೊಸಿಟೊ ಹೇಳಿದರು. ಕಟ್ಟಡವು ನಸ್ಸೌ ಸ್ಟ್ರೀಟ್ ಮತ್ತು ವಿಲಿಯಂ ಸ್ಟ್ರೀಟ್ ನಡುವೆ 57 ಆನ್ ಸ್ಟ್ರೀಟ್‌ನಲ್ಲಿದೆ. ಕಟ್ಟಡದ ಮೇಲಿನ ಹಂತಗಳು ಸಂಜೆ 4:15 ರ ಸುಮಾರಿಗೆ ಕುಸಿದು ಬಿದ್ದಿದೆ. ಕುಸಿತಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಸುರಕ್ಷತಾ ದೃಷ್ಟಿಯಿಂದ ಕುಸಿದು ಬಿದ್ದ ಗ್ಯಾರೇಜ್ ಪಕ್ಕದಲ್ಲಿರುವ ವಿಶ್ವವಿದ್ಯಾಲಯದ ಕಟ್ಟಡವನ್ನು ಅಧಿಕಾರಿಗಳು ತೆರವು ಮಾಡಿದ್ದಾರೆ.
ಘಟನೆ ಹಿನ್ನೆಲೆ ಮ್ಯಾನ್‌ಹ್ಯಾಟನ್‌ನಲ್ಲಿ ಕೆಳಗಿನ ಬೀದಿಗಳನ್ನು ಮುಚ್ಚಲಾಗಿದೆ..