ಪಪುವಾ ನ್ಯೂಗಿನಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪಪುವಾ ನ್ಯೂಗಿನಿ (ಪಿಎನ್ಜಿ) ದೇಶಕ್ಕೆ ಆಗಮಿಸುತ್ತಿದ್ದಂತೆ ಪೋರ್ಟ್ ಮೊರೆಸ್ಬಿ ವಿಮಾನ ನಿಲ್ದಾಣದಲ್ಲಿ ಅಪರೂಪದ ದೃಶ್ಯವೊಂದು ಕಂಡುಬಂತು. ಪಿಎನ್ಜಿ ಪ್ರಧಾನ ಮಂತ್ರಿ ಜೇಮ್ಸ್ ಮರಾಪೆ ಅವರು ನರೇಂದ್ರ ಮೋದಿ ಪಾದಗಳನ್ನು ಸ್ಪರ್ಶಿಸಿ, ಆಶೀರ್ವಾದ ಪಡೆಯುವ ಮೂಲಕ ಸರಳತೆ ಮೆರೆದರು.
ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ (ಜಪಾನ್, ಪಪುವಾ ನ್ಯೂಗಿನಿ, ಆಸ್ಟ್ರೇಲಿಯಾ) ಪ್ರವಾಸದ ಭಾಗವಾಗಿ ನಿನ್ನೆ ಪಪುವಾ ನ್ಯೂಗಿನಿಗೆ ಭೇಟಿ ನೀಡಿದ್ದಾರೆ. ಮೋದಿ ಆಗಮನದ ನಂತರ ಭಾರತದ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಈ ವೇಳೆ ಇಬ್ಬರೂ ಪ್ರಧಾನ ಮಂತ್ರಿಗಳು ನಿಂತು ಗೌರವ ವಂದನೆ ಸ್ವೀಕರಿಸಿದರು. ಇದು ಪಿಎನ್‌ಜಿಗೆ ಪಿಎಂ ಮೋದಿಯವರ ಮೊದಲ ಪ್ರವಾಸವಾಗಿದ್ದು, ಹಾಗೆಯೇ ಇಂಡೋ-ಪೆಸಿಫಿಕ್ ದೇಶಕ್ಕೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ.
ಸಾಮಾನ್ಯವಾಗಿ, ಸೂರ್ಯಾಸ್ತದ ನಂತರ ಪಪುವಾ ನ್ಯೂಗಿನಿಗೆ ಬರುವ ಯಾವುದೇ ದೇಶದ ನಾಯಕನಿಗೆ ಅದ್ಧೂರಿ ಸ್ವಾಗತ ನೀಡಲಾಗುವುದಿಲ್ಲ. ಆದರೆ, ಮೋದಿಗೆ ವಿಶೇಷ ವಿನಾಯಿತಿ ನೀಡಿ ಬಹಳ ವಿನಮ್ರತೆಯಿಂದ ಬರಮಾಡಿಕೊಳ್ಳಲಾಯಿತು. ಭಾರತದ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಹೊರಗೆ ಸಾಂಪ್ರದಾಯಿಕ ಜಾನಪದ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಮೋದಿ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರದ ವೇದಿಕೆಯ (ಎಫ್‌ಐಪಿಐಸಿ III ಶೃಂಗಸಭೆ) 3 ನೇ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದಾರೆ. FIPIC ಶೃಂಗಸಭೆಯಲ್ಲಿ 14 ದೇಶಗಳ ನಾಯಕರು ಭಾಗವಹಿಸುತ್ತಿದ್ದು, ಸಾಮಾನ್ಯವಾಗಿ ಸಂಪರ್ಕ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ.